Breaking News

ಕೋಲಾರ: ಆಕ್ರೋಶದ ಕಿಡಿ ಹೊತ್ತಿಸಿದ ಸರ್ಕಾರದ ನಡೆ

Spread the love

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ವಿಭಜನೆಗೆ ಸರ್ಕಾರ ಹಸಿರು ನಿಶಾನೆ ತೋರಿರುವುದು ಜಿಲ್ಲೆಯಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ.

ಹೈನುಗಾರಿಕೆಯು ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, ಬಹುಪಾಲು ರೈತರು ಕೃಷಿಯ ಜತೆಗೆ ರಾಸುಗಳನ್ನು ಸಾಕಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯು ರೈತರ ಪ್ರಮುಖ ಆದಾಯ ಮೂಲವಾಗಿದ್ದು, ಕೋವಿಡ್‌ ಸಂಕಷ್ಟದಲ್ಲೂ ಅನ್ನದಾತರ ಕೈ ಹಿಡಿದಿದೆ.

ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿಯ ಹರಿಕಾರ ಮಾಜಿ ಸಚಿವ ಎಂ.ವಿ.ಕೃಷ್ಣಪ್ಪರ ಹೆಸರಿನಲ್ಲಿ ಎಂವಿಕೆ ಗೋಲ್ಡನ್‌ ಡೇರಿ ಸ್ಥಾಪಿಸಬೇಕೆಂಬ ಕೂಗು ಬಲವಾಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನವೂ ನಡೆದಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ₹ 220 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣ ಮಾಡಲಾಗಿತ್ತು.

ಬಳಿಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಕೋಲಾರ ಜಿಲ್ಲೆಗೆ ಸುಮಾರು ₹ 185 ಕೋಟಿ ಅಂದಾಜು ವೆಚ್ಚದ ಎಂವಿಕೆ ಗೋಲ್ಡರ್‌ ಡೇರಿ ಯೋಜನೆ ಘೋಷಣೆ ಮಾಡಲಾಗಿತ್ತು. ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ಗೋಲ್ಡನ್‌ ಡೇರಿ ಕಾಮಗಾರಿಗೆ ಶಂಕುಸ್ಥಾಪನೆ ಸಹ ನೆರವೇರಿಸಿದ್ದರು.

ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಈ ಯೋಜನೆಗೆ ಅಡ್ಡಗಾಲು ಹಾಕಿದ್ದರಿಂದ ಕಾಮಗಾರಿ ಆರಂಭವಾಗಲೇ ಇಲ್ಲ. ಆರೋಗ್ಯ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಾ.ಕೆ.ಸುಧಾಕರ್‌ ಮತ್ತು ಕೋಚಿಮುಲ್‌ ಆಡಳಿತ ಮಂಡಳಿಯಲ್ಲಿನ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲ ನಿರ್ದೇಶಕರು ಒಕ್ಕೂಟ ವಿಭಜನೆಗೆ ಸರ್ಕಾರದ ಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದರು.

ಇದರ ಬೆನ್ನಲ್ಲೇ ಜಿಲ್ಲೆಯ ಜನಪ್ರತಿನಿಧಿಗಳು ಶ್ರೀನಿವಾಸಪುರ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ನೇತೃತ್ವದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಜಿಲ್ಲೆಯಲ್ಲಿ ಎಂವಿಕೆ ಗೋಲ್ಡನ್‌ ಡೇರಿ ಸ್ಥಾಪನೆಯಾದ ನಂತರವಷ್ಟೇ ಒಕ್ಕೂಟ ವಿಭಜಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದ್ದರು. ಇದಕ್ಕೆ ಸಮ್ಮತಿಸಿದ್ದ ಮುಖ್ಯಮಂತ್ರಿಗಳು ಇದೀಗ ಸೋಮವಾರದ ಸಚಿವ ಸಂಪುಟ ಸಭೆಯಲ್ಲಿ ಒಕ್ಕೂಟದ ವಿಭಜನೆಗೆ ಅಸ್ತು ಎಂದಿರುವುದು ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಅಸಮಾಧಾನ ಮೂಡಿಸಿದೆ.

ಹಳೆಯ ಡೇರಿ: ಕೋಚಿಮುಲ್‌ ವ್ಯಾಪ್ತಿಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,870 ಪ್ರಾಥಮಿಕ ಹಾಲು ಸಹಕಾರ ಸಂಘಗಳಿದ್ದು, ಸುಮಾರು 2.87 ಲಕ್ಷ ಹಾಲು ಉತ್ಪಾದಕರು ಒಕ್ಕೂಟದ ಸದಸ್ಯರಾಗಿದ್ದಾರೆ. ಒಕ್ಕೂಟದಲ್ಲಿ ಪ್ರತಿನಿತ್ಯ ಸುಮಾರು 9.50 ಲಕ್ಷ ಲೀಟರ್‌ ಹಾಲು ಸಂಗ್ರಹಣೆಯಾಗುತ್ತಿದ್ದು, ಒಕ್ಕೂಟವು ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ.

ಕೋಲಾರ ಜಿಲ್ಲೆಯಲ್ಲಿ ದಿನಕ್ಕೆ 5.50 ಲಕ್ಷ ಲೀಟರ್‌ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 4 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಸದ್ಯ ಕೋಲಾರ ಜಿಲ್ಲಾ ಕೇಂದ್ರದಲ್ಲಿರುವ ಡೇರಿಯು ಸುಮಾರು 30 ವರ್ಷಗಳಷ್ಟು ಹಳೆಯದು. ಇಲ್ಲಿನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳು ಹಳೆಯವಾಗಿದ್ದು, ಡೇರಿ ಚಟುವಟಿಕೆಗಳಿಗೆ ಹಿನ್ನಡೆ ಆಗುತ್ತಿದೆ.

ಹೀಗಾಗಿ ಒಕ್ಕೂಟದ ವಿಭಜನೆಗೂ ಮುನ್ನ ಅತ್ಯಾಧುನಿಕ ತಂತ್ರಜ್ಞಾನದ ಮೆಗಾ ಡೇರಿ ಸ್ಥಾಪಿಸಬೇಕು ಎಂಬುದು ಜಿಲ್ಲೆಯ ಜನರ ಬೇಡಿಕೆಯಾಗಿತ್ತು. ಆದರೆ, ಜಿಲ್ಲೆಯ ಜನರ ಬೇಡಿಕೆ ಉಪೇಕ್ಷಿಸಿದ ಸರ್ಕಾರ ಒಕ್ಕೂಟದ ವಿಭಜನೆಗೆ ಮಣೆ ಹಾಕಿದೆ. ಸರ್ಕಾರದ ನಡೆಯಿಂದ ಅಸಮಾಧಾನಗೊಂಡಿರುವ ಜಿಲ್ಲೆಯ ಜನಪ್ರತಿನಿಧಿಗಳು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಸಭೆ ನಡೆಸಲು ತೀರ್ಮಾನಿಸಿದ್ದಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ