72ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ದಲಿತರ ಸಬಲೀಕರಣಕ್ಕಾಗಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇದೇ ನವೆಂಬರ್ 25ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಧಾನಸೌಧ ಚಲೋ ನಡೆಸಲು ಮುಂದಾಗಿದೆ.
ಹೌದು ಬೆಳಗಾವಿಯ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ರವಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ 1919 ನವೆಂಬರ್ 7ರಂದು ಬಾಬಾಸಾಹೇಬ ಅಂಬೇಡ್ಕರ್ ಅವರು ಸಾತಾರದಲ್ಲಿ 1ನೇ ತರಗತಿಗೆ ಹೋಗಿದ್ದ ದಿನ ಹಿನ್ನೆಲೆ ವಿದ್ಯಾರ್ಥಿ ದಿನ ನಿಮಿತ್ಯ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ನಂತರ ದಲಿತರ ಸಬಲೀಕರಣಕ್ಕಾಗಿ ಬಡ್ತಿ ಮೀಸಲಾತಿ, ವಿದ್ಯಾರ್ಥಿ ವೇತನ ಹೆಚ್ಚಳ, ಭೂಮಿ, ವಸತಿ, ಶಿಕ್ಷಣ, ಬ್ಯಾಕ್‍ಲಾಗ್ ನೇಮಕಾತಿ, ಉದ್ಯೋಗ ಭದ್ರತೆ, ಎಸ್‍ಸಿಪಿ, ಎಸ್‍ಟಿಪಿ ಯೋಜನೆಯ ಅನುಸಾರ 2014ರಿಂದ ಹಂಚಿಕೆಯಾಗಿರುವ ಹಣದ ಬಗ್ಗೆ ಸಾರ್ವಜನಿಕ ಲೆಕ್ಕ ಪರಿಶೋಧನೆ ಮತ್ತು ಅಲೆಮಾರಿ ಅಭಿವೃದ್ಧಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನವೆಂಬರ್ 25ರಂದು ವಿಧಾನಸೌಧ ಚಲೋ ಹಮ್ಮಿಕೊಂಡಿರುವ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ನಮ್ಮ ಇನ್‍ನ್ಯೂಸ್ ಜೊತೆಗೆ ಮಾತನಾಡಿದ ದಲಿತ ಮುಖಂಡ ಮಲ್ಲೇಶ ಚೌಗುಲೆ ವಿಶ್ವರತ್ನ ಬಾಬಾಸಾಹೇಬ ಅಂಬೇಡ್ಕರ್ ಅವರು ಶಾಲೆಗೆ ಹೋಗಿದ್ದ ಇಂದಿನ ದಿನವನ್ನು ಯಾರೂ ಮರೆಯಬಾರದು. ಈ ದಿನವನ್ನು ವಿದ್ಯಾರ್ಥಿ ದಿನವನ್ನಾಗಿ ಎಲ್ಲರೂ ಒಗ್ಗಟ್ಟಾಗಿ ಆಚರಿಸಬೇಕು ಎಂದು ಕರೆ ನೀಡಿದರು.
ವಿಧಾನಸೌಧ ಚಲೋ ಬಗ್ಗೆ ಇದೇ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮಹಾಂತೇಶ ತಳವಾರ ಬೆಳಗಾವಿಯಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ರ್ಯಾಲಿಯಲ್ಲಿ ಭಾಗಿಯಾಗಲಿದ್ದೇವೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿ ನಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರ್ಯಾಲಿ ಮಾಡುತ್ತೇವೆ ಎಂದು ಹೆಚ್ಚಿನ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಿದ್ದಪ್ಪ ಕಾಂಬಳೆ, ಗೌತಮ ಪಾಟೀಲ್, ಅಶೋಕ, ಕೃಷ್ಣಾ ಸೇರಿದಂತೆ ಇನ್ನಿತರ ದಲಿತಪರ ಮುಖಂಡರು ಉಪಸ್ಥಿತರಿದ್ದರು.