ಬೆಂಗಳೂರು: ಆಟೋ ರಿಕ್ಷಾ ಇಎಂಐ ಪಾವತಿಸಲು ಇಟ್ಟಿದ್ದ ನಗದನ್ನು ಬಳಕೆ ಮಾಡಿದ್ದಕ್ಕಾಗಿ ಆಟೋ ಚಾಲಕನೋರ್ವ ತನ್ನ ಪತ್ನಿಯನ್ನು ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಸಿದ್ದಪುರದಲ್ಲಿ ವರದಿಯಾಗಿದೆ.
ನಾಜಿಯಾ ಮೃತ ದುರ್ದೈವಿಯಾಗಿದ್ದು, ಕೆಎಂ ಕಾಲೋನಿಯ ನಿವಾಸಿಯೆಂದು ಗುರುತಿಸಲಾಗಿದೆ.
ಆಕೆಯ ಪತಿ ಶೇಖ್ ಫಾರೂಖ್ ಎಂಬಾತ ಆಟೋ ಚಾಲಕನಾಗಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. “ಆರೋಪಿ ಶೇಖ್ ಫಾರೂಖ್, ಆಟೋ ಇಎಂಐ ಪಾವತಿಸುವುದಕ್ಕಾಗಿ 6,500 ರೂಪಾಯಿ ನಗದು ಹಣವನ್ನು ನೀಡಿದ್ದ. ಅದನ್ನು ಕೇಳಿದಾಗ ಪತ್ನಿಯಿಂದ ಸರಿಯಾದ ಉತ್ತರ ದೊರೆಯಲಿಲ್ಲ. ಇದರಿಂದ ಕೋಪಗೊಂಡ ಆತ, ಪತ್ನಿಯನ್ನು ಥಳಿಸಲು ಪ್ರಾರಂಭಿಸಿದ್ದಾನೆ. ಈ ವೇಳೆ ಆಕೆ ತಾನು ಆ ಹಣವನ್ನು ಚಿನ್ನಾಭರಣ ಖರೀದಿಸಲು ಬಳಕೆ ಮಾಡಿದ್ದಾಗಿ ತಿಳಿಸಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ವ್ಯಕ್ತಿ ಆಕೆಯ ಮೇಲೆ ಮಾರಣಾಂತಿಕ ವಸ್ತುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಘರ್ಷಣೆಯ ಸದ್ದು ಕೇಳಿ ಬಂದ ನೆರೆಯಲ್ಲಿದ್ದ ಮನೆಯ ಜನರು ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆ ವೇಳೆಗೆ ಆಕೆ ಮೃತಪಟ್ಟಿದ್ದರು.
ಸಂತ್ರಸ್ತೆಯ ಕುಟುಂಬ ಸದಸ್ಯರು, ಪೋಷಕರು ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಫಾರೂಖ್ ನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
Laxmi News 24×7