Breaking News

ತುಮಕೂರು-ಯಶವಂತಪುರ ನಡುವೆ ಮೆಮು ರೈಲಿಗೆ ಬೇಡಿಕೆ

Spread the love

ಬೆಂಗಳೂರು: ತುಮಕೂರು-ಬೆಂಗಳೂರು ನಡುವಿನ ರೈಲು ಮಾರ್ಗದ ವಿದ್ಯುದ್ದೀಕರಣ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆಯೂ ನಡೆದಿದೆ. ಎರಡೂ ನಗರಗಳ ನಡುವೆ ಮೆಮು ರೈಲು(ಎಲೆಕ್ಟ್ರಿಕ್ ರೈಲು) ಸಂಚಾರಕ್ಕೆ ಈಗ ಬೇಡಿಕೆ ಹೆಚ್ಚಾಗಿದೆ.

 

ಬೆಂಗಳೂರಿನಿಂದ ತುಮಕೂರಿಗೆ ನಿತ್ಯ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ಕೆಲಸಕ್ಕೆ ಬೆಂಗಳೂರಿಗೆ ಬಂದು ಹೋಗುವ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಶವಂತಪುರದಿಂದ ತುಮಕೂರಿಗೆ ಪ್ರಯಾಣದ ಅವಧಿ ಗರಿಷ್ಠ ಒಂದೂವರೆ ಗಂಟೆ ಆಗಿರುವುದರಿಂದ ರೈಲಿನಲ್ಲಿ ಪ್ರಯಾಣಕ್ಕೆ ಜನ ಬಯಸುತ್ತಾರೆ.

ಕೋವಿಡ್ ಪೂರ್ವದಲ್ಲಿ ಡೀಸೆಲ್ ಎಂಜಿನ್‌ ರೈಲು ಗಾಡಿಯೇ ದಿನಕ್ಕೆ ನಾಲ್ಕು ಟ್ರಿಪ್ ಸಂಚರಿಸುತ್ತಿತ್ತು. ಬೆಳಿಗ್ಗೆ 9.30ಕ್ಕೆ ಬೆಂಗಳೂರಿನಿಂದ ಹೊರಟು 11 ಗಂಟೆಗೆ ತುಮಕೂರಿಗೆ ತೆರಳುತ್ತಿತ್ತು. ಅಲ್ಲಿಂದ 11.30ಕ್ಕೆ ಹೊರಟು ಮಧ್ಯಾಹ್ನ 1ಕ್ಕೆ ಬೆಂಗಳೂರಿಗೆ ಬರುತ್ತಿತ್ತು. 1.30ಕ್ಕೆ ಬೆಂಗಳೂರಿನಿಂದ ಹೊರಟು 3ಕ್ಕೆ ತುಮಕೂರಿಗೆ ತಲುಪಿ, 4.30ಕ್ಕೆ ಅಲ್ಲಿಂದ ಹೊರಟು ಸಂಜೆ 6ಕ್ಕೆ ಬೆಂಗಳೂರಿಗೆ ಬಂದು ತಲುಪುತ್ತಿತ್ತು.

ಇದು ಬೆಂಗಳೂರು ಮತ್ತು ತುಮಕೂರು ನಡುವೆ ಅತ್ಯಂತ ಕಡಿಮೆ ದರದಲ್ಲಿ ಪ್ರಯಾಣ ಮಾಡಲು ಜನರಿಗೆ ಅನುಕೂಲ ಆಗುತ್ತಿತ್ತು. ಕೋವಿಡ್‌ ಬಳಿಕ ಈ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಬೆಳಿಗ್ಗೆ 9.20ಕ್ಕೆ ಯಶವಂತಪುರದಿಂದ ಹೊರಡುವ ಡೆಮು ರೈಲು 11ಕ್ಕೆ ತುಮಕೂರು ತಲುಪಲಿದೆ. ಸಂಜೆ ತನಕ ಸುಮಾರು 5 ಗಂಟೆ ಅಲ್ಲಿಯೇ ನಿಂತಿದ್ದು ಬಳಿಕ ಯಶವಂತಪುರಕ್ಕೆ ಬರುತ್ತಿದೆ. ಕನಿಷ್ಠ ಈ ರೈಲನ್ನು ಅರಸೀಕೆರೆ ತನಕ ಹೋಗಿ ಬರಲು ಅವಕಾಶ ಕಲ್ಪಿಸಿದರೆ ಜನರಿಗೆ ಅನುಕೂಲ ಆಗಲಿದೆ ಎನ್ನುತ್ತಾರೆ ರೈಲು ಪ್ರಯಾಣಿಕರು.

ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಅ.29ರಂದು ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆ ನಡೆದಿದೆ. ಈಗ ಮೆಮು ರೈಲು ಸಂಚಾರ ಆರಂಭಿಸಿದರೆ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ ಆಗಲಿದೆ. ರೈಲ್ವೆ ಇಲಾಖೆಯ ಬೆಂಗಳೂರು ವಿಭಾಗದ ಸಂಸದರ ಸಭೆ ಸದ್ಯದಲ್ಲೇ ನಡೆಯಲಿದ್ದು, ತುಮಕೂರು-ಬೆಂಗಳೂರು ಪ್ರಯಾಣಿಕರ ಸಮಸ್ಯೆ ಬಗ್ಗೆ ಅಲ್ಲಿ ಸಂಸದರು ಧ್ವನಿ ಎತ್ತಬೇಕು ಎಂದು ರೈಲ್ವೆ ಹೋರಾಟಗಾರ ಕೃಷ್ಣ ಪ್ರಸಾದ್ ಒತ್ತಾಯಿಸಿದರು.

‘ಡೆಮು(ಡೀಸೆಲ್) ರೈಲು ಸಂಚಾರ ತಾತ್ಕಾಲಿಕ ಆಗಿದ್ದು, ಎಲೆಕ್ಟ್ರಿಕ್ ರೈಲು ಸಂಚಾರ ಒಮ್ಮೆ ಆರಂಭವಾದರೆ ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ರೈಲುಗಳ ಸಂಚಾರ ಹೆಚ್ಚಿಸಲಾಗುವುದು’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ