ಬೆಂಗಳೂರು : ‘ಪೈರಸಿ ಮಾಡಲು ಯತ್ನಿಸುವವರ ಮೇಲೆ ಕಣ್ಣಿಡುತ್ತೇವೆ. ಬಿಡುವುದಿಲ್ಲ, ಶಿಕ್ಷೆ ಆಗುತ್ತದೆ ಸಿನಿಮಾ ತಯಾರಕರ ರಕ್ಷಣೆಗೆ ಎಲ್ಲ ಪ್ರಯತ್ನ ಮಾಡುತ್ತೇವೆ’ ಎಂದು ಗುರುವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಕರ್ನಾಟಕ ಸಿನಿಮಾ ನಿಯಂತ್ರಣ ಕಾಯ್ದೆ 1964 ರ ನಂತರ 2014 ರಲ್ಲಿ ನಿಯಮಾವಳಿ ರೂಪಿಸಿತ್ತು. ಇದಕ್ಕೀಗ ತಿದ್ದುಪಡಿ ತರುವ ಪ್ರಸ್ತಾವನೆ ಇದೆ” ಎಂದು ತಿಳಿಸಿದರು.
”ಮೊದಲೆಲ್ಲ ಚಿತ್ರಮಂದಿರದಲ್ಲಿ ಪ್ರೊಜೆಕ್ಟರ್ ಗೆ ಪ್ರತ್ಯೇಕ ಕೊಠಡಿ, ಸಿಬ್ಬಂದಿ ಇರುತ್ತಿದ್ದರು. ಈಗ ಮಲ್ಟಿಪ್ಲೆಕ್ಸ್ ಇವೆ. ತಂತ್ರಜ್ಞಾನ ಮುಂದುವರಿದಿದೆ. ಇದಕ್ಕೆ ತಕ್ಕಂತೆ ಕಾನೂನು ರೂಪಿಸಲು ಚರ್ಚೆ ನಡೆಯುತ್ತಿದೆ” ಎಂದರು.
”ಈಗ ಚಿತ್ರಮಂದಿರದಲ್ಲಿ ಆಪರೇಟರ್ ಬೇಕಿಲ್ಲ. 10 ಪರದೆಗೆ ಇಬ್ಬರು ಸಾಕು. ಪ್ರತಿ ವರ್ಷ ಪರವಾನಗಿ ಶುಲ್ಕ ಪರಿಷ್ಕರಣೆ ಮಾಡುತ್ತಿತ್ತು. ಇದನ್ನು 5 ವರ್ಷಕ್ಕೊಮ್ಮೆ ಮಾಡಬೇಕೆಂಬ ಬೇಡಿಕೆ ಇದೆ” ಎಂದರು.
”ಪೈರಸಿ ಇತ್ತೀಚಿನ ಪಿಡುಗು. ಕೋಟಿಗಟ್ಟಲೆ ಹಣ ಸುರಿದು ತಯಾರಿಸಿದ ಸಿನಿಮಾವನ್ನ ಕ್ಷಣಾರ್ಧದಲ್ಲಿ ಮಾಡಿ, ಶ್ರಮ, ಹಣ ದುರ್ಬಳಕೆ ಮಾಡುವ ಪ್ರಯತ್ನ ನಡೆಯುತ್ತಿದೆ. ಪೈರಸಿದಾರರ ವಿರುದ್ಧ ಕ್ರಮ ಜರುಗಿಸಲು ಸಿಸಿಬಿ, ಸಿಐಡಿ (ಸೈಬರ್) ಜಂಟಿ ಕಾರ್ಯಾಚರಣೆ ಪಡೆ ರಚನೆ ಮಾಡಲಾಗಿದೆ” ಎಂದರು.
ನ.1 ರಿಂದ ರಾಜ್ಯದ ಜೈಲಿನೊಳಗೆ ಇರುವ ಅನಕ್ಷರಸ್ಥ ಕೈದಿಗಳಿಗೆ ಅಕ್ಷರ ಜ್ಞಾನ. ಒಟ್ಟು 16 ಸಾವಿರ ಕೈದಿಗಳು 50 ಜೈಲುಗಳಲ್ಲಿದ್ದು, ಪ್ರಸ್ತುತ 6 ಸಾವಿರ ಅನಕ್ಷರಸ್ಥ ಕೈದಿಗಳಿರುವುದಾಗಿ ಅಂದಾಜಿಸಲಾಗಿದೆ. ಹೆಬ್ಬೆಟ್ಟು ಹಾಕಿ ಒಳಗೆ ಬಂದವರು, ಅಕ್ಷರಜ್ಞಾನ ಪಡೆದು ಸಹಿ ಮಾಡಿ ಹೊರಹೋಗಲಿದ್ದಾರೆ” ಎಂದರು.
”ಕವಾಯಿತು ಮಾಡುವಾಗ ಇಂಗ್ಲಿಷ್ ಕಾಷನ್ ಕೊಡುತ್ತಿದ್ದೆವು. ನ.1 ರಿಂದ ಇದನ್ನು ಕನ್ನಡದಲ್ಲೇ ಮಾಡಲು ಸೂಚನೆ ನೀಡಲಾಗಿದೆ. ಕನ್ನಡ ಬಳಕೆಗೆ ಆದ್ಯತೆ ನೀಡಿ ಈಗಾಗಲೇ ತರಬೇತಿ ಕೊಡಲಾಗುತ್ತಿದೆ” ಎಂದರು.