ಧಾರವಾಡ: ನಗರದ ಖ್ಯಾತ ಉದ್ಯಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತರಾಗಿರುವ ಯು. ಬಿ. ಶೆಟ್ಟಿ ಮನೆ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

ಧಾರವಾಡದ ದಾಸನಕೊಪ್ಪದ ಮನೆ ಮೇಲೆ ಗೋವಾದಿಂದ ಬಂದ 5 ಜನರ ಐಟಿ ತಂಡ ದಾಳಿ ನಡೆಸಿ ತಪಾಸಣೆಯಲ್ಲಿ ತೊಡಗಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರ ತಾಲೂಕಿನ ಉಪ್ಪುಂದ ಮೂಲದ ಯು. ಬಿ. ಶೆಟ್ಟಿ ಕ್ಲಾಸ್ ಒನ್ ಕಾಂಟ್ರ್ಯಾಕ್ಟರ್ ಜೊತೆಗೆ ಉದ್ಯಮಿಯಾಗಿದ್ದಾರೆ. ಜೊತೆಗೆ ಡಿ.ಕೆ.ಶಿವಕುಮಾರ್ ಆಪ್ತರು ಎನ್ನಲಾಗಿದ್ದು ಇತ್ತೀಚಿಗೆ ಡಿಕೆಎಸ್ ಆಪ್ತ ವಲಯದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರು.
ಇತ್ತೀಚಿನ ದಿನಗಳಲ್ಲಿ ಶಾಲೆ, ಕಾಲೇಜು ಉದ್ಯಮದಲ್ಲಿ ತೊಡಗಿದ್ದ ಶೆಟ್ಟಿ ಹಲವು ವರ್ಷಗಳಿಂದ ಡಿಕೆಎಸ್ ಆಪ್ತ ಎಂತಲೇ ಗುರುತಿಸಿಕೊಂಡಿದ್ದಾರೆ. ಯು.ಬಿ.ಶೆಟ್ಟಿ ಮನೆಗೆ ಐಟಿ ಅಧಿಕಾರಿಗಳಿ ದಾಳಿ ಇಡುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡ ರಾಬರ್ಟ್ ದದ್ದಾಪುರಿ ಮನೆಗೆ ಭೇಟಿ ನೀಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಐಟಿ ರೇಡ್ ಆಗಲು ಕಾರಣ ತಿಳಿದು ಬಂದಿಲ್ಲ.