ಬೆಂಗಳೂರು: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಅರ್ಹರಿಗೆ ನೀಡುವ ಸಲುವಾಗಿ ರಾಜ್ಯ ಸರಕಾರ ಜನರಿಂದಲೇ ಶಿಫಾರಸು ಆಹ್ವಾನಿಸಿತ್ತು. ಆದರೆ ಒಂದೇ ಸಂಸ್ಥೆಯ ಪರವಾಗಿ 1 ಸಾವಿರಕ್ಕೂ ಹೆಚ್ಚು ಶಿಫಾರಸುಗಳು ಬಂದಿದ್ದು, ಸರಕಾರವೇ ಬೆಚ್ಚಿ ಬೀಳುವಂತೆ ಮಾಡಿದೆ.
ಕೆಲವು ವ್ಯಕ್ತಿಗಳ ಪರವೂ ಭರಪೂರ ಶಿಫಾರಸುಗಳು ಬಂದಿವೆ. “ಇಂಥವರಿಗೆ’ ಪ್ರಶಸ್ತಿ ಕೊಡಿ ಎಂದು ದಾಖಲೆಗಳ ಸಮೇತ 200 – 300 ಶಿಫಾರಸುಗಳು ಸೇವಾ ಸಿಂಧು ಮೂಲಕ ಸಲ್ಲಿಕೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿವೆ.
ಈ ಬಾರಿ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಸಾರ್ವಜನಿಕರೇ ಗುರುತಿಸಿ ಪ್ರಶಸ್ತಿಗೆ ಶಿಫಾರಸು ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಕರೆ ನೀಡಿದ್ದರು.
28 ಸಾವಿರ ಶಿಫಾರಸು
ಪ್ರತೀ ವರ್ಷ ಐದರಿಂದ ಆರು ಸಾವಿರ ಜನರು ಅರ್ಜಿ ಸಲ್ಲಿಸುತ್ತಿದ್ದರೆ ಈ ವರ್ಷ 28 ಸಾವಿರ ಶಿಫಾರಸುಗಳು ಬಂದಿವೆ ಎನ್ನಲಾಗಿದೆ.
ನಾಳೆ ಅಂತಿಮ ಪಟ್ಟಿ
ಶುಕ್ರವಾರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿ ಸಭೆ ನಡೆಯಲಿದ್ದು, ಅಂತಿಮ 65 ಜನ ಸಾಧಕರ ಪಟ್ಟಿ ಸಿದ್ಧಗೊಳಿಸಲಾಗುವುದು ಎಂದು ತಿಳಿದು ಬಂದಿದೆ. ಅ. 30ರ ಸಂಜೆ ಪ್ರಶಸ್ತಿ ಪುರಸ್ಕೃತರ ಅಧಿಕೃತ ಪಟ್ಟಿಯನ್ನು ಸಚಿವ ಸುನಿಲ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.