ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾದ ‘ಕಿತ್ತೂರು ಕರ್ನಾಟಕ ‘ಘೊಷಣೆ ಕುರಿತು ಸಂಪುಟದಲ್ಲಿ ರ್ಚಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್-ಕರ್ನಾಟಕ ಭಾಗವನ್ನು ‘ಕಲ್ಯಾಣ ಕರ್ನಾಟಕ’ ಎಂದು ಘೊಷಣೆ ಮಾಡಿರುವಂತೆ ಬೆಳಗಾವಿ ಭಾಗವನ್ನು ‘ಕಿತ್ತೂರು ಕರ್ನಾಟಕ’ ಎಂದು ಘೊಷಿಸುವ ಕುರಿತು ಸಚಿವ ಸಂಪುಟದಲ್ಲಿ ರ್ಚಚಿಸಲಾಗುವುದು. ಆ ಬಳಿಕ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು. ಅ.23ರಿಂದ ಎರಡು ದಿನ ಜರುಗಲಿರುವ ಕಿತ್ತೂರು ಉತ್ಸವದಲ್ಲಿ ಭಾಗವಹಿಸುತ್ತೇನೆ ಎಂದರು.
ತಜ್ಞರೊಂದಿಗೆ ರ್ಚಚಿಸಿ ನಿರ್ಧಾರ: ಕೋವಿಡ್-19 ಕಾರಣದಿಂದಾಗಿ ಅದ್ದೂರಿ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡಿಲ್ಲ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಅದ್ದೂರಿ ರಾಜ್ಯೋತ್ಸವ ಆಚರಣೆಗೆ ವಿವಿಧ ಕನ್ನಡಪರ ಸಂಘಟನೆಗಳು ಒತ್ತಾಯ ಮಾಡಿರುವುದು ಗಮನಕ್ಕೆ ಬಂದಿದೆ. ಈ ಕುರಿತು ತಜ್ಞರ ಸಮಿತಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ರ್ಚಚಿಸಿ, ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ಬರೀ ಹೆಸರಷ್ಟೇ ಬದಲಾವಣೆ
ಮುಂಬೈ-ಕರ್ನಾಟಕ ಭಾಗವನ್ನು ಕಿತ್ತೂರು ಕರ್ನಾಟಕ ಎಂದು ಕೇವಲ ಹೆಸರಷ್ಟೇ ಬದಲಾವಣೆ ಮಾಡಲಾಗುತ್ತದೆ. ಈ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ರಚಿಸುವ ಪ್ರಸ್ತಾವನೆ ಸದ್ಯಕ್ಕೆ ಇಲ್ಲ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ ಪ್ರತ್ಯೇಕ ಮಂಡಳಿ ಇದೆ. ಅದರ ಮೂಲಕ ಪ್ರತಿವರ್ಷ ಕೋಟ್ಯಾಂತರ ರೂ.ಗಳನ್ನು ಆ ಭಾಗದ ಅಭಿವೃದ್ಧಿಗೆ ವೆಚ್ಚ ಮಾಡಲಾಗುತ್ತದೆ. ಆದರೆ ಮುಂಬೈ ಕರ್ನಾಟಕ ಭಾಗಕ್ಕೆ ಅಂತಹ ಯಾವುದೇ ಮಂಡಳಿ ಪ್ರತ್ಯೇಕವಾಗಿಲ್ಲ. ಆ ಭಾಗದ ಹೋರಾಟಗಾರರು ಸಹ ಹೆಸರು ಬದಲಾವಣೆ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ ಹೊರತು ಬೇರೆ ಯಾವುದೇ ಬೇಡಿಕೆ ಇಟ್ಟಿಲ್ಲ.
ಹಿರಿಯ ಸಂಶೋಧಕರಾಗಿದ್ದ ದಿವಂಗತ ಡಾ. ಎಂ. ಚಿದಾನಂದಮೂರ್ತಿ ಮಾತ್ರ ಪದೇ ಪದೇ ಸರ್ಕಾರಕ್ಕೆ ಒತ್ತಡ ತರುತ್ತಿದ್ದರು. ಬೆಳಗಾವಿಯ ಕನ್ನಡಪದ ಹೋರಾಟಗಾರ ಅಶೋಕ್ ಚಂದರಗಿ ಹಾಗೂ ಇತರರು ಆ.8 ಮತ್ತು ಸೆಪ್ಟಂಬರ್ 25ಕ್ಕೆ ಎರಡು ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಅರ್ಪಿಸಿದ್ದರು. ಅದಕ್ಕೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ. ಕಿತ್ತೂರು ಕರ್ನಾಟಕಕ್ಕೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಸೇರುತ್ತವೆ.
ಮುಂಬೈ ಕರ್ನಾಟಕ ಎಂಬುದು ದಾಸ್ಯದ ಸಂಕೇತವಾಗುತ್ತದೆ. ಆದ್ದರಿಂದ ಹೆಸರು ಬದಲಾವಣೆ ಮಾಡಬೇಕು. ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ಕಿತ್ತೂರು ಸಂಸ್ಥಾನದ ಹೆಸರು ಇರಬೇಕು ಎಂಬುದು ನಮ್ಮ ಒತ್ತಾಯ. ಬೇರೆ ಯಾವುದೇ ಪ್ರಸ್ತಾಪವೂ ಸರ್ಕಾರದ ಮುಂದೆ ಇಟ್ಟಿಲ್ಲ
| ಅಶೋಕ್ ಚಂದರಗಿ ಕನ್ನಡಪರ ಹೋರಾಟಗಾರ, ಬೆಳಗಾವಿ