ಬೆಂಗಳೂರು : ಈ ಬಾರಿಯೂ ಪರಿಸರಕ್ಕೆ ಮಾರಕವಾಗುವ ಪಟಾಕಿ ಸಿಡಿಸಲು ಅನುಮತಿ ದೊರೆಯುವ ಸಾಧ್ಯತೆಗಳಿಲ್ಲ. ಈಗಾಗಲೇ ಹಸಿರು ನ್ಯಾಯಾಲಯ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಿರುವುದರಿಂದ ನ್ಯಾಯಾಲಯದ ಆದೇಶ ಪಾಲಿಸಲು ಬಿಬಿಎಂಪಿ ತೀರ್ಮಾನಿಸಿದೆ. ಹೀಗಾಗಿ ನಗರದಲ್ಲಿ ಕೇವಲ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಕಳೆದ ಬಾರಿಯ ದೀಪಾವಳಿ ಸಂದರ್ಭದಲ್ಲೂ ಭಾರೀ ಸದ್ದು ಮಾಡುವ ಹಾಗೂ ಪರಿಸರಕ್ಕೆ ಹಾನಿ ಮಾಡುವ ಪಟಾಕಿ ಮಾರಾಟ ಮಾಡಲು ಅನುಮತಿ ನೀಡಿರಲಿಲ್ಲ.
ಅದೇ ರೀತಿ ಈ ಬಾರಿಯೂ ಕೇವಲ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ಸಿಗುವ ಸಾಧ್ಯತೆಗಳಿವೆ. ಇದರ ಜತೆಗೆ ನೆರೆಯ ರಾಜ್ಯಗಳಿಂದ ಅಕ್ರಮವಾಗಿ ನಗರಕ್ಕೆ ತಂದು ಪರಿಸರಕ್ಕೆ ಮಾರಕವಾಗುವಂತಹ ಪಟಾಕಿ ಮಾರಾಟ ಮಾಡುವವರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.
ಈಗಾಗಲೇ ಗೋದಾಮೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿ ಸೋಟಿಸಿ ಇಬ್ಬರು ಮೃತಪಟ್ಟಿದ್ದರು. ಈ ಘಟನೆ ನಂತರ ಅಕ್ರಮ ಪಟಾಕಿ ಗೋದಾಮುಗಳ ಮೇಲೆ ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ದಾಳಿ ನಡೆಸಿ ಮುಂದೆ ಪಟಾಕಿ ಮಾರದಂತೆ ಎಚ್ಚರಿಕೆ ನೀಡಿದ್ದರು.
Laxmi News 24×7