ಶಿರಸಿ: ಕೆಮಿಕಲ್ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿ ಅಕ್ಕ ಪಕ್ಕದಲ್ಲಿ ಗದ್ದೆ, ತೋಟ ಧಗಧಗಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಕ್ರಾಸ್‌ನ ಬಳಿ ನಡೆದಿದೆ.

ಇಂದು ಬೆಳಗ್ಗೆ ಸುಮಾರು 5.30ರಿಂದ 5.45ರ ನಡುವೆ ಅಂಕೋಲ ಭಾಗದ ಕಡೆ ತೆರಳುತ್ತಿದ್ದ ಟ್ಯಾಂಕರ್ ಚಾಲಕನ ನಿರ್ಲಕ್ಷದಿಂದ ಘಾಟಿಯಲ್ಲಿ ಪಲ್ಟಿಯಾಗಿ ಸ್ಫೋಟಗೊಂಡಿದೆ. ಈ ವೇಳೆ ಚಾಲಕನಿಗೆ ಅಲ್ಪ ಗಾಯವಾಗಿದ್ದು ತಕ್ಷಣದಲ್ಲಿ ಆತನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.. ಅಷ್ಟೊತ್ತಿಗಾಗಲೇ ಕಿಚ್ಚು ಹಬ್ಬಿದೆ. ಮುಂಜಾಗೃತಾ ಕ್ರಮವಾಗಿ ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ 66ರ ಸಂಚಾರವನ್ನು ಬಂದ್ ಮಾಡಲಾಗಿದೆ ಎಂಬ ಮಾಹಿತಿ ಇದೆ.

ಅರೆ ಕ್ಷಣದಲ್ಲಿ ಹರಡಿದ ಕಿಚ್ಚು
ಇನ್ನು ಟ್ಯಾಂಕರ್ ಪಲ್ಟಿಯಾದ ಬಳಿಕ ಕಿಚ್ಚು ಕಾಡ್ಗಿಚ್ಚಿನಂತೆ ವೇಗವಾಗಿ ಹಬ್ಬಿ ಅಕ್ಕಪಕ್ಕದಲ್ಲಿನ ಹೊಲ, ತೋಟಗಳಿಗೆ ನುಗ್ಗಿದೆ. ಪರಿಣಾಮ ಸದಾ ಹಚ್ಚು ಹಸಿರಿನಿಂದ ಕಂಗೊಳಿಸುತ್ತಿದ್ದ ಪ್ರದೇಶದಲ್ಲಿ ಅಗ್ನಿಯ ಜ್ವಾಲೆ ನರ್ತನ ಶುರು ಮಾಡಿದೆ. ಎಲ್ಲಿ ನೋಡಿದರು ಅಗ್ನಿಯ ಜ್ವಾಲೆ ಇಡೀ ಪ್ರದೇಶವನ್ನು ಹಸಿರಿನಿಂದ ಕೆಂಬಣ್ಣಕ್ಕೆ ತಿರುಗಿತ್ತು..

ಸುಟ್ಟು ಕರಕಲಾದ ಭತ್ತದ ಬೆಳೆ
ಟ್ಯಾಂಕರ್ ನಲ್ಲಿನ ಅನಿಲ ಸೋರಿಕೆಯಾದ್ದರಿಂದ ಅನಿಲ ಭತ್ತದ ಬೆಳೆಗಳ ಮೇಲೆ ಬಿದ್ದಿದ್ದು ಗದ್ದೆಯ ಬಹುತೇಕ ಭಾಗ ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾಗಿದೆ. ಹೀಗೆ ಅಕ್ಕಪಕ್ಕದ ತೋಟಗಳಿಗೆ ಬೆಂಕಿ ಹಬ್ಬಿದ್ದು ಸರ್ವನಾಶ ಮಾಡಿದೆ. ಬಂಗಾರದ ಬೆಳೆಯನ್ನು ನೆಚ್ಚಿಕೊಂಡು ಕೂತಿದ್ದ ಹಲವರ ಬದುಕಲ್ಲಿ ಈ ಬಾರಿ ಅಗ್ನಿ ದೇವ ಬರೆ ಎಳೆದು ಬಿಟ್ಟಿದ್ದಾನೆ.
Laxmi News 24×7