ಬೆಂಗಳೂರು: ಗಲಭೆ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಆರೋಪಿಗಳ ಫೋನ್ ಕಾಲ್ ಲೆಕ್ಕ ನೋಡಿ ಶಾಕ್ ಆಗಿದ್ದಾರೆ.ಘಟನೆ ನಡೆದ ರಾತ್ರಿ ಸುಮಾರು 30 ಆರೋಪಿಗಳ ಮೊಬೈಲ್‍ಗಳಿಂದ ಹೊರ ಜಿಲ್ಲೆಗಳಿಗೆ ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಿಂದಲೇ ಸಾವಿರಾರು ಕಾಲ್ ಹೋಗಿದೆ. ಎಲ್ಲವನ್ನು ಡಿ-ಕೋಡಿಂಗ್ ಮಾಡುವ ಕೆಲಸ ಆರಂಭಗೊಂಡಿದೆ. ಇನ್ನಷ್ಟು ಆರೋಪಿಗಳ ಪತ್ತೆಗಾಗಿ ಪೊಲೀಸರು 800ಕ್ಕೂ ಸಿಸಿಟಿವಿಗಳನ್ನು ವಶಕ್ಕೆ ಪಡೆದಿದ್ದಾರೆ.
ದೊಂಬಿ ನಡೆಯುವ ಹಿಂದಿನ ದಿನ ಪುಂಡರನ್ನು ಸೇರಿಸಲು 10 ಫೇಸ್‍ಬುಕ್ ಲೈವ್ ಮಾಡಲಾಗಿತ್ತು. ಪ್ರಚೋದಿಸುವ ಮೂಲಕ 50 ಜನರಿದ್ದ ಗುಂಪನ್ನು 5 ಸಾವಿರಕ್ಕೆ ಏರಿಸಲಾಗಿತ್ತು. ಫೇಸ್‍ಬುಕ್ ಲೈವ್ ನಡೆಸಿದ್ದ ಪುಂಡರು ಪರಾರಿಯಾಗಿದ್ದಾರೆ. ಬಹುತೇಕರು ಎಫ್‍ಬಿ ಅಕೌಂಟ್ ಡಿಲೀಟ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.ಡಿಜೆ ಹಳ್ಳಿ ಪೊಲೀಸರು ತಡರಾತ್ರಿ ಪ್ರಮುಖ ಆರೋಪಿ ಎಸ್‍ಡಿಪಿಐನ ಸಲೀಂ ಸೇರಿದಂತೆ 57 ಮಂದಿಯನ್ನು ಬಂಧಿಸಿದ್ದು, ಈವರೆಗೆ 370ಕ್ಕೂ ಹೆಚ್ಚು ಆರೋಪಿಗಳು ಅಂದರ್ ಆಗಿದ್ದಾರೆ. ಅಷ್ಟೇ ಅಲ್ಲ, ಸದ್ಯದಲ್ಲೇ ಉದ್ಘಾಟನೆಗೆ ಸಿದ್ದವಾಗಿದ್ದ ಹೆಗ್ಗಡೆನಗರದ ಎಸ್‍ಡಿಪಿಐ ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, 8 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದಾಳಿ ವೇಳೆ ಕಬ್ಬಿಣದ ರಾಡ್, ಬ್ಯಾಟ್ ಸಮೇತ ಹಲವು ಮಾರಕಾಸ್ತ್ರ ಗಳನ್ನು ವಶಕ್ಕೆ ಪಡೆಯಲಾಗಿದೆ.