ಮಂಡ್ಯ: ನಾನು ಜೆಡಿಎಸ್ ಬಗ್ಗೆ ಮಾತನಾಡುವುದೇ ಇಲ್ಲ. ಆದರೆ ಎಚ್.ಡಿ.ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರುತ್ತಾರೆ. ನಾನು ಏನು ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಬಗ್ಗೆ ಮಾತನಾಡದಿದ್ದರೆ ಸಿದ್ದರಾಮಯ್ಯಗೆ ನಿದ್ರೆ ಬರಲ್ಲ ಎಂದು ಎಚ್‌ಡಿಕೆ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡರ ಬಗ್ಗೆ ಮಾತನಾಡುವುದನ್ನು ಬಿಟ್ಟಿದ್ದೇನೆ. ಏಕೆಂದರೆ ನನ್ನ ಮಾತುಗಳನ್ನು ಕೋಮುವಾದಿ ಬಣ್ಣ ಕಟ್ಟಿ ತಿರುಚುತ್ತಾರೆ. ಟೀಕೆ ಮಾಡಿದರೆ ಮಾಡಿಕೊಳ್ಳಲಿ ಬಿಡಿ. ನಾನು ಎಚ್‌ಡಿಕೆ ಹೇಳಿಕೆಗಳನ್ನು ನಿರ್ಲಕ್ಷ್ಯ ಮಾಡಿದ್ದೀನಿ ಎಂದು ಸ್ಪಷ್ಟಪಡಿಸಿದರು.
ಮಂಡ್ಯದಲ್ಲಿ ಜೆಡಿಎಸ್ ಶಕ್ತಿಯಾಗಿದ್ದರೆ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸುತ್ತಿರಲಿಲ್ಲ. ಜಿಲ್ಲೆಯಲ್ಲಿ ಆ ಪಕ್ಷ ಬಹಳ ವೀಕ್ ಆಗಿದೆ. ಎಂಪಿ ಚುನಾವಣೆಯಲ್ಲಿ ನಾವು ಅಭ್ಯರ್ಥಿ ಹಾಕಿರಲಿಲ್ಲ. ಅವರು ಸೋತರು, ಎಷ್ಟು ಅಂತರದಲ್ಲಿ ಸೋತರು?. ಎಷ್ಟು ಎಂಎಲ್‌ಎಗಳಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ನಿಖಿಲ್ ಸೋಲನ್ನು ಅಣಕಿಸಿದರು.