ಬೆಂಗಳೂರು: ಇಂಟರ್ನೆಟ್ ಮೂಲಕ ಕ್ರೀಡೆ ಅಥವಾ ಕ್ಯಾಸಿನೋಗಳ ಮೇಲೆ ಬೆಟ್ಟಿಂಗ್ ಮಾಡುವ ಆನ್ ಲೈನ್ ಜೂಜನ್ನು (ಇ-ಗ್ಯಾಂಬ್ಲಿಂಗ್) ನಿಷೇಧಿಸಿ ರಾಜ್ಯ ಸರಕಾರ ಭಾನುವಾರ ಅಧ್ಯಾದೇಶ ಜಾರಿ ಮಾಡಿದೆ.
ಸರಕಾರದ ನಿರ್ಧಾರದಿಂದ ಡ್ರೀಮ್ ಇಲೆವೆನ್ , ಪೇಟಿಎಂ ಫಸ್ಟ್ ಗೇಮ್ ಸೇರಿ ಎಲ್ಲಾ ಪ್ರಮುಖ ಆನ್ ಲೈನ್ ಗೇಮ್ ಗಳಿಗೆ ಅಂಕುಶ ಬಿದ್ದಂತಾಗಿದೆ.
ರಾಜ್ಯದಲ್ಲಿ ಆನ್‌ಲೈನ್ ಜೂಜು ಅಥವಾ ಬೆಟ್ಟಿಂಗ್‌ಗೆ ನಿಷೇಧ ಹೇರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿತ್ತು. ಕರ್ನಾಟಕ ಪೊಲೀಸ್ ಕಾಯ್ದೆ, 1963ಕ್ಕೆ ತಿದ್ದುಪಡಿ ತಂದು ಕಂಪ್ಯೂಟರ್ ಡಿವೈಸ್, ಮೊಬೈಲ್, ಮೊಬೈಲ್ ಆಯಪ್, ಎಲೆಕ್ಟ್ರಾನಿಕ್ ಸಾಧನ ಬಳಸಿ ಆನ್‌ಲೈನ್ ಮೂಲಕ ಹಣದ ಅವ್ಯವಹಾರ ನಡೆಸುವ ಜೂಜಾಟವನ್ನು ನಿಷೇಧಿಸಲಾಗಿದೆ.
ಈ ಕುರಿತು ಹೈಕೋರ್ಟ್‌ಗೆ ರಿಟ್ ಅರ್ಜಿಯೂ ಸಲ್ಲಿಕೆಯಾಗಿದ್ದು, ಆನ್‌ಲೈನ್ ಬೆಟ್ಟಿಂಗ್ ಕುರಿತು ಸ್ಪಷ್ಟ ನಿಲುವು ತೆಗೆದುಕೊಳ್ಳುವಂತೆ ಸರಕಾರಕ್ಕೆ ಹೈಕೋರ್ಟ್ ಹಲವು ಬಾರಿ ತಾಕೀತು ಮಾಡಿತ್ತು.
ಆನ್‌ಲೈನ್ ಮೂಲಕ ಗೇಮ್ ಆಡುವುದು, ಬೆಟ್ಟಿಂಗ್, ಟೋಕನ್ ಮೂಲಕ ಹಣದ ಆಟ ಆಡುವುದು, ಎಲೆಕ್ಟ್ರಾನಿಕ್ ಮನಿ, ಯಾವುದೇ ಆಟಕ್ಕೆ ಆನ್‌ಲೈನ್ ಮೂಲಕ ಹಣದ ವರ್ಗಾವಣೆ ಮಾಡುವುದಕ್ಕೆ ಇನ್ನು ಮುಂದೆ ನಿಷೇಧವಿರಲಿದ್ದು, ಅಪರಾಧ ಎಂದು ಪರಿಗಣಿಸಲಾಗುತ್ತದೆ.
ಕೇರಳ, ತಮಿಳು ನಾಡಿನಲ್ಲಿ ನಿಷೇಧ
ತಮಿಳುನಾಡಿನಲ್ಲಿ ಕಳೆದ ವರ್ಷವೇ ಆನ್‌ಲೈನ್ ಜೂಜಿಗೆ ನಿಷೇಧ ಹೇರಲಾಗಿದೆ. ಕೇರಳದಲ್ಲಿ ಪ್ರಸಕ್ತ ವರ್ಷದ ಆರಂಭದಲ್ಲೇ ಇದಕ್ಕೆ ನಿಷೇಧ ಹೇರಲಾಗಿದೆ.
ಶಿಕ್ಷೆ ಪ್ರಮಾಣವೂ ಹೆಚ್ಚಳ
ಕರ್ನಾಟಕ ಪೊಲಿಸ್ ಕಾಯ್ದೆ ಸೆಕ್ಸನ್ 2ಕ್ಕೆ ತಿದ್ದುಪಡಿ ತರಲಾಗಿದ್ದು ಸೆಕ್ಸನ್ 78ಎ/3 ಪ್ರಕಾರ, ಈಗಿರುವ ಒಂದು ತಿಂಗಳ ಜೈಲು ಶಿಕ್ಷೆ ಪ್ರಮಾಣವನ್ನು 6 ತಿಂಗಳುಗಳಿಗೆ ವಿಸ್ತರಿಸಲಾಗಿದ್ದು, , ಒಂದು ವರ್ಷದ ಶಿಕ್ಷೆ ಪ್ರಮಾಣವನ್ನು 3 ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈಗಿರುವ 500 ರೂ. ದಂಡ 10 ಸಾವಿರ ರೂ.ಗೆ ಹೆಚ್ಚಳ, ಈಗಿರುವ 1,000 ರೂ. ದಂಡವನ್ನು 1 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.
ಕೇಂದ್ರ ಸರಕಾರವೇ “ಸಾರ್ವಜನಿಕ ಜೂಜು ಕಾಯ್ದೆ, 1867′ ಜಾರಿ ಮಾಡಿತ್ತು. ಬಳಿಕ ಉತ್ತರಪ್ರದೇಶ, ಮಧ್ಯಪ್ರದೇಶ, ಪಂಜಾಬ್‌ನಂಥ ಕೆಲವು ರಾಜ್ಯಗಳು ಇದೇ ಕಾಯ್ದೆಯನ್ನು ಜಾರಿ ಮಾಡಿದವು. ಆದರೆ ಅವುಗಳಲ್ಲಿ ಆನ್‌ಲೈನ್ ಜೂಜು ಕುರಿತು ಪ್ರಸ್ತಾವವಿರಲಿಲ್ಲ. ಮೊದಲಿಗೆ ಈ ಕುರಿತ ಉಲ್ಲೇಖವಿರುವ ಕಾನೂನು ಜಾರಿ ಮಾಡಿದ್ದು ಸಿಕ್ಕಿಂ ಮತ್ತು ನಾಗಾಲ್ಯಾಂಡ್. ಗೋವಾದಲ್ಲಿ ಸರಕಾರಿ ಪ್ರಾಯೋಜಿತ ಕ್ಯಾಸಿನೋಗಳಲ್ಲಿ ಜೂಜಿಗೆ ಅವಕಾಶವಿದೆ.