ಮೈಸೂರು: ವಿಶ್ವವಿಖ್ಯಾತ 411ನೇ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ವಿದ್ಯುಕ್ತ ಚಾಲನೆ ಸಿಗಲಿದೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಐತಿಹಾಸಿಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸೇರಿದಂತೆ ಗಣ್ಯರು ಆ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ದಸರಾ ಸಂಬ್ರಮದಲ್ಲಿರುವ ಅರಮನೆ ನಗರಿ ಮೈಸೂರು ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಇನ್ನು ಕೊರೊನಾ ಮಾರ್ಗಸೂಚಿ ಪಾಲಿಸಿ ದಸರಾ ಆಚರಣೆಗೆ ಸರ್ಕಾರ ಮುಂದಾಗಿದೆ.
ಕೊರೊನಾ ಹಿನ್ನೆಲೆ ಸತತ ಎರಡನೇ ವರ್ಷವೂ ಸರಳವಾಗಿ ದಸರಾ ಆಚರಣೆ ನಡೆಯುತ್ತಿದ್ದು ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ರಾಜ ವಂಶಸ್ಥ ಯದುವೀರ್ಗೆ ಕಂಕಣ ಧಾರಣೆ ನಡೆಸಲಾಗಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನ ಏರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಖಾಸಗಿ ದರ್ಬಾರ್ ವೇಳೆ ಯದುವೀರ್ ಜೊತೆ ತಾಯಿ ಪ್ರಮೋದಾದೇವಿ ಒಡೆಯರ್, ಪತ್ನಿ ತ್ರಿಷಿಕಾ ಕುಮಾರಿ ಮಾತ್ರ ಉಪಸ್ಥಿತಿ ಇರಲಿದ್ದಾರೆ.