ಬೆಳಗಾವಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಮುಖ ರಾಜಕಾರಣಿಗಳು. ಚೀಪ್ ಪಾಪ್ಯುಲಾರಿಟಿ ಸಲುವಾಗಿ ಮೀಡಿಯಾಗಳಲ್ಲಿ ಬರಲು ಏನೇನೋ ಹೇಳಬಾರದು. ಆರೆಸ್ಸೆಸ್ ಸಂಸ್ಕೃತಿ ಗೊತ್ತಿಲ್ಲದವರು ಏನೇನೋ ಹೇಳುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರನ್ನೋ ಖುಷಿ ಪಡಿಸುವ ಸಲುವಾಗಿ ಏನೇನೋ ಹೇಳಿಕೆ ಕೊಟ್ಟರೆ ಅರ್ಥವಿರಲ್ಲ. ಆರೆಸ್ಸೆಸ್ ನವರು ದೇಶ ಭಕ್ತರು ಎಂಬುದು ಮೊದಲು ಗೊತ್ತಿರಬೇಕು. ಅವರಿಗೆ ಬೇರೆ ರೀತಿ ಕಳಂಕ ಹಚ್ಚಲು ಪ್ರಯತ್ನ ಮಾಡಿದರೆ ಅದು ಹತ್ತುವುದಿಲ್ಲ. ದೇಶದ ಉದ್ದಗಲಕ್ಕೂ ರಾಷ್ಟ್ರ ಪ್ರೇಮ ಹುಟ್ಟಿಹಾಕುವ ಕೆಲಸ ಆರೆಸ್ಸೆಸ್ ಮಾಡುತ್ತಿದೆ. ಆರೆಸ್ಸೆಸ್ ನವರು ಯಾವುದೂ ಕೆಟ್ಟ ಕೆಲಸ ಇವತ್ತಿನವರೆಗೂ ಮಾಡಿಲ್ಲ. ದೇಶಕ್ಕಾಗಿ ಪ್ರಾಣ ತೆತ್ತ ಸಂಸ್ಥೆ ಆರೆಸ್ಸೆಸ್ ಎಂದು ಕಾರಜೋಳ ಹೇಳಿದರು.
ಆರ್‌ಎಸ್‌ಎಸ್ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳಿಕೆಗೆ ಕಾರಜೋಳ ಪ್ರತಿಕ್ರಿಯಿಸಿದ ಅವರು, ಸಂಘ ಪರಿವಾರದವರು ಐಎಎಸ್, ಐಪಿಎಸ್ ಆಗಿದ್ದಾರೆ ಅಂತಾ ಹೇಳುವುದು ಸುಳ್ಳು. ಹತಾಶರಾಗಿ ಈ ರೀತಿ ಹೇಳಿಕೆ ಕೊಡಬಾರದು. ಅವರ ಗೌರವಕ್ಕೆ ಧಕ್ಕೆ ಬರುತ್ತದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಹೇಳಿಕೆ ಕೊಡವುದು ಗೌರವ ಅಲ್ಲ ಎಂದು ಕಾರಜೋಳ ತಿರುಗೇಟು ನೀಡಿದರು.