ನವದೆಹಲಿ, ಅಕ್ಟೋಬರ್ 06: ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ, ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ದೆಹಲಿಯ ನಿವಾಸದಲ್ಲಿ ಮಂಗಳವಾರ ಭೇಟಿಯಾಗಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಹಾಗೂ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಯ ಬಗ್ಗೆ ಮಾತನಾಡಿದ್ದಾರೆ.
ಈ ಬಗ್ಗೆ ಸಭೆಯ ನಂತರ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ, “ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾದೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿದೆ. ಹಾಗೆಯೇ ಡ್ರಗ್ಸ್ ಹಾಗೂ ಶಸ್ತ್ರಾಸ್ತ್ರಗಳ ಅಕ್ರಮ ಸಾಗಾಟವನ್ನು ತಪ್ಪಿಸಲು ಪಂಜಾಬ್‌ನಲ್ಲಿ ಇರುವ ಅಂತಾರಾಷ್ಟ್ರೀಯ ಗಡಿಯನ್ನು ಮುಚ್ಚುವಂತೆ ಒತ್ತಾಯಿಸಿದೆ,” ಎಂದು ತಿಳಿಸಿದ್ದಾರೆ.
‘
“ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ರೈತರನ್ನು ಅನಾಗರಿಕ ಹತ್ಯೆ ಮಾಡಿರುವುದನ್ನು ನಾವು ಸಹಿಸಲಾರೆವು ಎಂದು ಹೇಳಿದ್ದೇನೆ. ಈ ಆಡಳಿತವು ನಮ್ಮ ನಾಯಕರನ್ನು ವಿನಾಕಾರಣ ಬಂಧನ ಮಾಡುವುದನ್ನು ನಿಲ್ಲಿಸಬೇಕು ಎಂದಿದ್ದೇನೆ. ಕರ್ತಾಪುರ ಕಾರಿಡಾರ್ ಅನ್ನು ಆದಷ್ಟು ಶೀಘ್ರದಲ್ಲಿ ತೆರೆಯಲು ಮನವಿ ಮಾಡಿದೇವೆ. ಈ ಹಿನ್ನೆಲೆ ಅತೀ ಶೀಘ್ರದಲ್ಲೇ ಸರ್ಕಾರ ನಿರ್ಧಾರ ಕೈಗೊಳ್ಳುವುದು ಎಂದು ಭರವಸೆಯನ್ನು ನೀಡಿದ್ದಾರೆ,” ಎಂದು ಹೇಳಿದರು.
ಇನ್ನು ದೆಹಲಿಗೆ ತೆರಳುವ ಮುನ್ನ ಚಂಡೀಗಢದಲ್ಲಿ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ, “ಕೇಂದ್ರ ಸರ್ಕಾರದ ಈ ಮೂರು ಕೃಷಿ ಕಾಯ್ದೆಗಳನ್ನು ಆದಷ್ಟು ಬೇಗೆ ರದ್ದು ಮಾಡಬೇಕು. ಈ ಮೂಲಕ ಉತ್ತರ ಪ್ರದೇಶದ ಲಂಖೀಪುರ ಖೇರಿಯಲ್ಲಿ ನಡೆದಂತಹ ಘಟನೆಯನ್ನು ತಡೆಯಬೇಕು. ನಾನು ಈ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿ ಮಾತುಕತೆ ನಡೆಸುತ್ತೇನೆ,” ಎಂದಿದ್ದರು.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಇನ್ನು ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಹಲವಾರು ರೈತ ಮುಖಂಡರುಗಳು ಈ ಪೈಕಿ ನಾಲ್ವರು ರೈತರು ಕಾರು ಹರಿದು ಹೋದ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.