ವಾಷಿಂಗ್ಟನ್: ಫೇಸ್‌ಬುಕ್ ಒಡೆತನದ ಸೋಷಿಯಲ್ ಮೀಡಿಯಾ ವೇದಿಕೆಗಳ ಸೇವೆಯಲ್ಲಿ ಸೋಮವಾರ ವ್ಯತ್ಯಯವಾಗಿದ್ದರಿಂದ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಸುಮಾರು 6 ಬಿಲಿಯನ್ ಡಾಲರ್ (44,728 ಕೋಟಿ ರೂ.) ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.
ಸೋಮವಾರ ಕೆಲವೇ ಗಂಟೆಗಳ ಅವಧಿಯಲ್ಲಿನ ಸೇವೆ ವ್ಯತ್ಯಯದಿಂದಾಗಿ ಕೋಟ್ಯಂತರ ನಷ್ಟವಾಗಿದೆ. ಪರಿಣಾಮವಾಗಿ ಜುಕರ್‌ಬರ್ಗ್ ಅವರು ವಿಶ್ವದ ಸಿರಿವಂತರ ಪಟ್ಟಿಯಲ್ಲಿಯೂ ಕೆಲವು ಸ್ಥಾನ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಫೇಸ್‌ಬುಕ್‌ನ ಷೇರು ಮೌಲ್ಯ ಸೋಮವಾರ ಒಂದೇ ದಿನ ಶೇ. 4.9 ರಷ್ಟು ಕುಸಿತ ಕಂಡಿದೆ. ಮಾತ್ರವಲ್ಲದೆ ಸೆಪ್ಟೆಂಬರ್ ಮಧ್ಯದಿಂದೀಚೆಗೆ ಬರೋಬ್ಬರಿ ಶೇ. 15 ರಷ್ಟು ಇಳಿಕೆಯಾಗಿದೆ.
ಫೇಸ್‌ಬುಕ್‌ನ ಆಂತರಿಕ ಸಮಸ್ಯೆಗಳನ್ನು ಉಲ್ಲೇಖಿಸಿ ʼದಿ ವಾಲ್ ಸ್ಟ್ರೀಟ್ ಜರ್ನಲ್ʼ ಪತ್ರಿಕೆಯು ಸೆಪ್ಟೆಂಬರ್ 13ರಿಂದ ಸರಣಿ ಲೇಖನಗಳನ್ನು ಪ್ರಕಟಿಸಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಫೇಸ್‌ಬುಕ್, ʻರಾಜಕೀಯ ಧ್ರುವೀಕರಣ ಸೇರಿದಂತೆ ತನ್ನ ಉತ್ಪನ್ನಗಳು ಎದುರಿಸುತ್ತಿರುವ ಸಮಸ್ಯೆಗಳು ಸಂಕೀರ್ಣವಾಗಿವೆ. ಇವು ತಂತ್ರಜ್ಞಾನದಿಂದ ಮಾತ್ರವೇ ಸೃಷ್ಟಿಯಾಗಿರುವವಲ್ಲʼ ಎಂದು ಒತ್ತಿ ಹೇಳಿತ್ತು.
Laxmi News 24×7