ಬೆಂಗಳೂರು: ಸರ್ಕಾರದಿಂದ ಭೂಮಿ ಪಡೆದು ಅನೇಕ ವರ್ಷಗಳಾದರೂ ಉದ್ಯಮ ಸ್ಥಾಪಿಸದ ಸಂಸ್ಥೆಗಳ ಭೂಮಿ ಮಂಜೂರಾತಿ ರದ್ದು ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಅವರು ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕೆ ಉದ್ದೇಶಕ್ಕೆ ಭೂಮಿ ಹಂಚಿಕೆಯಾಗಿದ್ದರೂ ಕಾರ್ಯಾರಂಭ ಮಾಡದೆ ಇದ್ದರೆ ಪುನರ್ ಪರಿಶೀಲನೆ ನಡೆಸಿ ಭೂಮಿ ಹಂಚಿಕೆಯನ್ನು ರದ್ದುಪಡಿಸಲಾಗುವುದು ಎಂದು ಹೇಳಿದ್ದಾರೆ.
ಬಳ್ಳಾರಿ ಭಾಗದಲ್ಲಿ ಭೂಮಿ, ನೀರು ಹಂಚಿಕೆಯಾಗಿ ಹತ್ತು ಹನ್ನೆರಡು ವರ್ಷಗಳು ಕಳೆದರೂ ಕೈಗಾರಿಕೆಗಳು ಪ್ರಾರಂಭವಾಗಿಲ್ಲ. ಇದರ ಬಗ್ಗೆ ಪುನರ್ ಪರಿಶೀಲನೆ ನಡೆಸಲಾಗುವುದು. ಇಂತಹವರ ಅಲಾಟ್‌ಮೆಂಟ್ ರದ್ದುಪಡಿಸಲಾಗುವುದು ಎಂದು ತಿಳಿಸಿದ್ದಾರೆ.
‘ವಿಶೇಷವಾಗಿ, ಈ ಭಾಗದಲ್ಲಿ ಲ್ಯಾಂಡ್ ಲಾಕ್ ಆಗಿದೆ. ಲ್ಯಾಂಡ್ ಲಾಕ್ ಬಿಡಿಸುವುದು ನಮ್ಮ ಸರ್ಕಾರದ ಉದ್ದೇಶ. ಯಾರು ನಿಜವಾಗಿ ಬಂಡವಾಳ ಹೂಡುತ್ತಾರೆ, ಯಾರು ಉದ್ಯೋಗ ಸೃಷ್ಟಿಸುತ್ತಾರೆ. ಅವರಿಗೆ ಆದ್ಯತೆ ಕೊಡಬೇಕು ಎಂಬುದು ನಮ್ಮ ನೀತಿ. ಬಂಡವಾಳ ಹೂಡಿಕೆಯ ಜೊತೆಗೆ ಉದ್ಯೋಗ ಸೃಷ್ಟಿಸುವಂತಹ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗುವುದು ಎಂದಿದ್ದಾರೆ.
‘ಕೈಗಾರಿಕೆ ಸ್ಥಾಪಿಸದ ಜಮೀನನ್ನು ರೈತರಿಗೆ ವಾಪಸ್ ಕೊಡುವ ಕುರಿತು ಪರಿಶೀಲನೆ ಮಾಡುತ್ತೇವೆ. ಈಗ ಏನೂ ಹೇಳುವುದಿಲ್ಲ. ಯಾವ ಉದ್ದೇಶಕ್ಕೆ ಜಮೀನು ನೀಡಲಾಗಿದೆಯೋ ಅದು ಆಗಬೇಕು ಎಂದು ಹೇಳಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತಲು ಜಾಗತಿಕ ಟೆಂಡರ್ ಕರೆದಿದ್ದರೂ ಸೂಕ್ತ ಸ್ಪಂದನೆ ಸಿಗಲಿಲ್ಲ. ಹೀಗಾಗಿ 20 ಕೋಟಿ ರೂ. ವೆಚ್ಚದಲ್ಲಿ ಸಮಾನಾಂತರ ಜಲಾಶಯ ನಿರ್ಮಿಸಲು ವಿಸ್ತೃತ ಯೋಜನಾ ವರದಿ ಸಿದ್ದಪಡಿಸಲಾಗುತ್ತಿದೆ. ವರದಿ ಬಂದ ಕೂಡಲೇ ಅಂತರರಾಜ್ಯಕ್ಕೆ ಸಂಬಂಸಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಸೌಹಾರ್ದಯುತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.