ಬೆಂಗಳೂರು: ಈ ತಿಂಗಳ 30ರಂದು ನಡೆಯಲಿರುವ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಿಗೆ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ನಡೆದ ರಾಜ್ಯ ಕೋರ್ ಕಮಿಟಿ ಸಭೆ ರವಿವಾರ ಅಂತಿಮಗೊಳಿಸಿದ್ದು, ಒಟ್ಟು ಆರು ಮಂದಿಯ ಹೆಸರನ್ನು ವರಿಷ್ಠರಿಗೆ ಕಳುಹಿಸಲು ತೀರ್ಮಾನಿಸಿದೆ.
ಸ್ಥಳೀಯವಾಗಿ ನಡೆಸಿದ ಸಮೀಕ್ಷೆ ಹಾಗೂ ಕೋರ್ ಕಮಿಟಿ ಸದಸ್ಯರ ಅಭಿಪ್ರಾಯದ ಹಿನ್ನೆಲೆಯಲ್ಲಿ ಹಾನಗಲ್‌ಗೆ ಸಂಸದ ಶಿವಕುಮಾರ್ ಉದಾಸಿ ಪತ್ನಿ ರೇವತಿ, ಕಲ್ಯಾಣ ಕುಮಾರ್ ಶೆಟ್ಟರ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನ್ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕ್ಷೇತ್ರಕ್ಕೆ ಪ್ರಮುಖವಾಗಿ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಅವರ ಪತ್ನಿ ರೇವತಿ, ಹಿರಿಯ ನಾಯಕ ಕಲ್ಯಾಣ ಕುಮಾರ್ ಶೆಟ್ಟರ್, ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ್ ಸಜ್ಜನ್, ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಹಾಂ ತೇಶ ಸೊಪ್ಪಿನ, ರಾಜಶೇಖರ ಗೌಡ ಕಾಟೇಗೌಡರ ಮುಂತಾದವರ ಹೆಸರು ಪ್ರಮುಖವಾಗಿ ಕೇಳಿ ಬಂದಿದ್ದವು.
ಶಿವಕುಮಾರ್‌ಗೆ ನಿರಾಕರಣೆ
ತನ್ನ ಪತ್ನಿಗೆ ಟಿಕೆಟ್ ನೀಡದಿದ್ದರೆ ತನಗೇ ನೀಡುವಂತೆ ಶಿವಕುಮಾರ್ ಉದಾಸಿ ನಾಯಕರಲ್ಲಿ ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ. ಆದರೆ, ಶಿವಕುಮಾರ್ ಸಂಸದ ಆಗಿರುವುದರಿಂದ ಅವರು ಗೆದ್ದರೆ ಲೋಕ ಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಾಗುತ್ತದೆ. ಆದ್ದರಿಂದ ಅನಗತ್ಯ ಸಮಸ್ಯೆ ಎದುರು ಹಾಕಿಕೊಳ್ಳುವುದು ಬೇಡ ಎನ್ನುವ ಕಾರಣಕ್ಕೆ ಅವರಿಗೆ ಟಿಕೆಟ್ ನೀಡುವುದು ಬೇಡ ಎನ್ನುವ ಅಭಿಪ್ರಾಯಕ್ಕೆ ನಾಯಕರು ಬಂದಿದ್ದಾರೆ ಎನ್ನಲಾಗಿದೆ.
ಸಿಂದಗಿಗೆ ಮೂವರ ಹೆಸರು
ಸಿಂಧಗಿಗೆ ಮಾಜಿ ಶಾಸಕ ರಮೇಶ್ ಬೂಸನೂರು, ಸಿದ್ದು ಬಿರಾದಾರ ಹಾಗೂ ಸಂಗನಗೌಡ ಪಾಟೀಲ್ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ ಎಂದು ತಿಳಿದು ಬಂದಿದೆ.ನಾಯಕರ ಚುನಾವಣ ಪ್ರಚಾ ರದ ವೇಳಾಪಟ್ಟಿ ಸಿದ್ದಪಡಿಸುವ ಜವಾಬ್ದಾರಿಯನ್ನು ರಾಜ್ಯಾಧ್ಯಕ್ಷರಿಗೆ ವಹಿಸಲಾಗಿದೆ ಎನ್ನಲಾಗಿದೆ.
ಎರಡು ಕ್ಷೇತ್ರಗಳಿಗೂ ಉಸ್ತುವಾರಿ ತಂಡ ನೇಮಕ
ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಿ ನಳಿನ್‌ಕುಮಾರ್ ಕಟೀಲು ಆದೇಶ ಹೊರಡಿಸಿದ್ದಾರೆ. ಸಿಂದಗಿಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಹಾನಗಲ್‌ಗೆ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ನೇತೃತ್ವದಲ್ಲಿ ಸಮಿತಿ ರಚಿಸ ಲಾ ಗಿದ್ದು, ಎರಡೂ ತಂಡದಲ್ಲೂ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೆಸರು ಇಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ.
ಸಿಂದಗಿ ತಂಡದಲ್ಲಿ ಗೋವಿಂದ ಕಾರಜೋಳ, ವಿ. ಸೋಮಣ್ಣ, ಸಿ.ಸಿ. ಪಾಟೀಲ್, ಶಶಿಕಲಾ ಜೊಲ್ಲೆ, ರಮೇಶ್ ಜಿಗಜಿಣಗಿ, ಬಸನಗೌಡ ಪಾಟೀಲ್ ಯತ್ನಾಳ್, ಲಕ್ಷ್ಮಣ ಸವದಿ, ಸೋಮನಗೌಡ ಪಾಟೀಲ್, ಎ.ಎಸ್. ಪಾಟೀಲ್ ನಡಹಳ್ಳಿ, ಪಿ. ರಾಜೀವ್, ಶ್ರೀಕಾಂತ ಕುಲಕರ್ಣಿ, ಬಾಬುರಾವ್ ಚಿಂಚನಸೂರ್ ಅವರಿದ್ದಾರೆ. ಹಾನಗಲ್ ತಂಡದಲ್ಲಿ ಮುರುಗೇಶ ನಿರಾಣಿ, ಜೆ.ಸಿ. ಮಾಧುಸ್ವಾಮಿ, ಬಿ.ಸಿ. ಪಾಟೀಲ್, ಶಿವರಾಮ್ ಹೆಬ್ಟಾರ್, ಶಿವಕುಮಾರ ಉದಾಸಿ, ಎನ್. ರವಿಕುಮಾರ್, ಮಹೇಶ್ ಟೆಂಗಿನಕಾಯಿ, ರಾಜುಗೌಡ, ನೆಹರೂ ಓಲೇಕಾರ, ಎಂ. ಚಂದ್ರಪ್ಪ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣ್‌ಕುಮಾರ್ ಗುತ್ತೂರು ಅವರಿದ್ದಾರೆ.