ಬಂಟ್ವಾಳ: ದ.ಕ.ಜಿಲ್ಲಾಡಳಿತ,ದ.ಕ.ಜಿ.ಪಂ.,ಸಮಾಜ ಕಲ್ಯಾಣ,ಹಿ.ವರ್ಗಗಳ ಕಲ್ಯಾಣ ಹಾಗೂ ಪ.ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅ. 4 ರಂದು ಬ್ರಹ್ಮರಕೊಟ್ಲುವಿನಲ್ಲಿರುವ ಬಂಟವಾಳದ ಬಂಟರಭವನದಲ್ಲಿ ನಡೆಯಲಿರುವ “ಅಂತ್ಯೋದಯ” ಇಲಾಖೆಗಳ ವಿವಿಧ ಯೋಜನೆಗಳ ರಾಜ್ಯಮಟ್ಟದ ಮಾಹಿತಿ ಕಾರ್ಯಾಗಾರದ ವ್ಯವಸ್ಥೆಯ ಹಿನ್ನಲೆಯಲ್ಲಿ ಸಮಾಜಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಶನಿವಾರ ಪೂರ್ವಸಿದ್ದತೆಯನ್ನು ಪರಿಶೀಲಿಸಿದರು.
ಬಳಿಕ ವಿವಿಧ ಇಲಾಖೆಯ ಅಧಿಕಾರಗಳೊಂದಿಗೆ ಕಾರ್ಯಕ್ರಮದ ಕುರಿತಂತೆ ಸಮಾಲೋಚನೆ ನಡೆಸಿದ ಸಚಿವರು ಕೆಲವೊಂದು ಸಲಹೆ,ಸೂಚನೆಗಳನ್ನಿತ್ತರು. ನಮ್ಮ ಇಲಾಖೆಯ ಯೋಜನೆಗಳನ್ನು ಸಾರ್ವಜನಿಕವಾಗಿ ಸದಸ್ಯರಿಗೆ ಅರಿವು ಮೂಡಿಸುವ ಮೂಲಕ ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಸಾಧ್ಯವಾಗುತ್ತಿದ್ದು,ಈ ನಿಟ್ಡಿನಲ್ಲಿ ಇಲಾಖಾ ಅಧಿಕಾರಿಗಳ ಸಹಿತ ಸಿಬ್ಬಂದಿಗಳು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದರು. ರಾಜ್ಯದ ಎಲ್ಲಾ ಜಿಲ್ಲೆಯಲ್ಲು ಗ್ರಾ.ಪಂ.,ನಗರಸ್ಥಳೀಯಾಡಳಿತ ಸದಸ್ಯರಿಗೆ ಅಂತ್ಯೋದಯ ಮಾಹಿತಿ ಕಾರ್ಯಾಗಾರ ನಡೆಸಲು ಚಿಂತಿಸಲಾಗಿದ್ದು,ಈ ತಿಂಗಳ ಅಂತ್ಯದೊಳಗೆ ಶಿವಮೊಗ್ಗ ,ಮಡಿಕೇರಿ,ಚಿಕ್ಕಮಗಳೂರು ಸಹಿತ 10 ಜಿಲ್ಲೆಗಳಲ್ಲಿ ಕಾರ್ಯಾಗಾರ ನಡೆಸಲುದ್ದೇಶಿಸಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರಿಂದ ಉದ್ಘಾಟನೆಯಾದ ಬಳಿಕ ಎಂಟು ಮಂದಿ ಫಲಾನುಭವಿಗಳಿಗೆ ಗೌರವಾರ್ಪಣೆ,ಇಲಾಖೆಯ ಯೋಜನೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಕಾರ್ಯಾಗಾರ ನಡೆಯಲಿದ್ದು,ಮಧ್ಯಾಹ್ನದ ನಂತರ ಸಂವಾದ ಕಾರ್ಯಕ್ರಮ ನಡೆಯುವುದು ಈ ದೆಸೆಯಲ್ಲಿ ಮಾಡಿಕೊಳ್ಳಲಾದ ಸಿದ್ದತೆಯ ಬಗ್ಗೆ ದ.ಕ.ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ.ಯೋಗೀಶ್ ಎಸ್.ಬಿ.ಅವರು ಮಾಹಿತಿ ನೀಡಿದರು.ಸಂಸದ ನಳಿನ್ ಕುಮಾರ್ ಕಟೀಲ್,ಸಚಿವರಾದ ಶ್ರೀರಾಮಲು,ಎಸ್ .ಅಂಗಾರ ,ಜಿಲ್ಲೆಯ ಶಾಸಕರು,ವಿ.ಪ.ಸದಸ್ಯರು,ವಿವಿಧ ನಿಗಮ ಮಂಡಳಿ ಅಧ್ಯಕ್ಷರು,ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದು,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಇಡೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ.ಜಿಲ್ಲೆಯ ವಿವಿಧ ತಾಲೂಕಿನಿಂದ ಸುಮಾರು 2500 ಕ್ಕು ಅಧಿಕ ಮಂದಿ ಗ್ರಾ.ಪಂ.,ನಗರ ಸ್ಥಳೀಯಾಡಳಿತ ಸಂಸ್ಥೆಯ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಕೋವಿಡ್ ನಿಯಮಾವಳಿಯನ್ನು ಪಾಲಿಸಿಕೊಂಡು ಕಾರ್ಯಾಗಾರವನ್ನು ರೂಪಿಸಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಈ ಸಂದರ್ಭ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ ಅವರು ಮಾತನಾಡಿ, ಬಂಟ್ವಾಳವನ್ನು ಕೇಂದ್ರೀಕರಿಸಿ ಕಾರ್ಯಾಗಾರ ಆಯೋಜಿಸಿರುವುದಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಅಭಿನಂದನೆ ಸಲ್ಲಿಸಿದರಲ್ಲದೆ, ಕಾರ್ಯಕ್ರಮದ ಯಶಸ್ವಿಗೆ ಕಾರ್ಯಕರ್ತರು ಕೂಡ ಪೂರ್ಣವಾಗಿ ಸಹಕರಿಸಲಿದ್ದಾರೆ ಹಾಗೆಯೇ ಆರೋಗ್ಯ ತಪಾಸಣೆ ದೃಷ್ಟಿಯಿಂದ ಸಕಲ ವ್ಯವಸ್ಥೆಯನ್ನೊಳಗೊಂಡ ಸಂಚಾರಿ ಸಾರಿಗೆ ಐಸಿಯು ಬಸ್ ವ್ಯವಸ್ಥೆಯನ್ನು ಸಭಾಂಗಣದ ಮುಂಭಾಗದಲ್ಲಿ ಕಲ್ಪಿಸಲಾಗುವುದು ಎಂದರು.
ಮಾಜಿ ಜಿಪಂ ಉಪಾಧ್ಯಕ್ಷ ಸತೀಶ್ ಕುಂಪಲ,ನಿಕಟಪೂರ್ವ ಜಿಪಂ ಸದಸ್ಯ ರವೀಂದ್ರಕಂಬಳಿ,ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ನೋಡಲ್ ಅಧಿಕಾರಿ ಚಂದ್ರನಾಯ್ಕ್ ,ಹಿ.ವರ್ಗಗಳ ಜಿಲ್ಲಾಧಿಕಾರಿ ಸಚಿನ್ ಕುಮಾರ್,ವಿವಿಧ ಇಲಾಖೆಯ ತಾಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.
ತಾಪಂ ಮಾಜಿ ಸದಸ್ಯರಾದ ಸೋಮಪ್ಪ ಕೋಟ್ಯಾನ್ ,ಗಣೇಶ್ ಸುವರ್ಣ, ದಿನೇಶ್ ಅಮ್ಟೂರು,ಬಿಜೆಪಿ ಮಂಡಲ ಪ್ರ.ಕಾರ್ಯದರ್ಶಿಗಳಾದ ಡೊಂಬಯ ಅರಳ,ರವೀಶ್ ಶೆಟ್ಟಿ ಕರ್ಕಳ,ಪ್ರಮುಖರಾದ ಪ್ರದೀಪ್ ಅಜ್ಜಿಬೆಟ್ಟು,ಸೀತಾರಾಮ ಪೂಜಾರಿ,ಪವನ್ ಶೆಟ್ಟಿ ಮೊದಲಾದವರಿದ್ದರು.
ಕೊಪ್ಪಳದಲ್ಲಿ ಈಚೆಗೆ ನಡೆದ ಘಟನೆ ಮತ್ತೆ ಮರಕಳಿಸದಂತೆ ಮತ್ತು ಅಸ್ಪ್ರಶ್ಯತೆಯ ನಿವಾರಣೆಯ ಹಿನ್ನಲೆಯಲ್ಲಿ ಪ್ರತಿ ಗ್ರಾಮಪಂಚಾಯತ್ ಮಟ್ಟದಲ್ಲಿ ಸಾಧುಸಂತರನ್ನು ಸೇರಿಸಿಕೊಂಡು ಸಾಮರಸ್ಯ ಅಭಿಯಾನವನ್ನು ಇಲಾಖೆಯ ಮೂಲಕ ಹಮ್ಮಿಕೊಳ್ಳುವ ಚಿಂತನೆಇದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.