ಕಾರವಾರ: ಅತ್ಯಾಚಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕಾನೂನು ರೂಪಿಸಿ , ಹಾಗೂ ಅತ್ಯಾಚಾರಿಗಳಿಗೆ ಗಲ್ಲಿಗೆ ಹಾಕಿ ಎಂದು ಒತ್ತಾಯಿಸಿ , ಯುವಕನೋರ್ವ ಸೈಕಲ್ ಜಾಥ ಆರಂಭಿಸಿದ್ದಾನೆ. ಯುವಕ 17 ಜಿಲ್ಲೆ ಸೈಕಲ್ ಯಾನ ಮುಗಿಸಿ, ಇಂದು ಕಾರವಾರ ಜಿಲ್ಲೆಯಿಂದ ಹಾವೇರಿಯತ್ತ ಪಯಣ ಬೆಳಸಿದ. ಅತ್ಯಾಚಾರಗಳ ವಿರುದ್ಧ ಸರ್ಕಾರದ ಮೇಲೆ ಒತ್ತಡ ಹೇರಲು ಹಾಗೂ ಜನರನ್ನು ಜಾಗೃತಗೊಳಿಸುವ ಸಲುವಾಗಿ ಯುವಕ ‘ಅಖಂಡ ಕರ್ನಾಟಕ ಸೈಕಲ್ ಯಾತ್ರೆ’ ಮಾಡುತ್ತಿದ್ದು ,ಈಗಾಗಲೇ 2000 ಕಿ.ಮೀ. ಯಾತ್ರೆ ಪೂರ್ಣ ಮಾಡಿದ್ದಾನೆ.
ಈ ಸೈಕಲ್ ಯಾನ ಮಾಡುತ್ತರುವ ಯುವಕ ಬೆಂಗಳೂರಿನ ಬನ್ನೇರುಘಟ್ಟದ ನಿವಾಸಿ ಕಿರಣ್ ಬಿ.ವಿ. ದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ಮಹಿಳೆಯರು, ಮಕ್ಕಳು ಮತ್ತು ಯುವತಿಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಅವರಿಗೆ ರಕ್ಷಣೆ ಒದಗಿಸಲು ಈ ಬಗ್ಗೆ ಕಾನೂನು ರೂಪಿಸುವಂತೆ ಒತ್ತಾಯಿಸಿ ಕಿರಣ್ ರಾಜ್ಯದ 31 ಜಿಲ್ಲೆಗಳಲ್ಲಿ ಯಾತ್ರೆ ನಡೆಸುತ್ತಿದ್ದಾನೆ. ಪ್ರತಿ ಜಿಲ್ಲೆಗೆ ಭೇಟಿ ನೀಡಿದಾಗಲೂ ಅಲ್ಲಿಯ ಜಿಲ್ಲಾ ಕೇಂದ್ರಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಕಾರ್ಯ ಮಾಡುತ್ತಿದ್ದಾನೆ. ಇಂದು ಕಾರವಾರ ಜಿಲ್ಲಾಡಳಿತವನ್ನು ಭೇಟಿಯಾಗಿ , ಮಾಧ್ಯಮಗಳ ಜೊತೆ ಮಾತನಾಡಿದ.
ಕೇವಲ ಮಹಿಳೆಯರಿಗೆ ರಕ್ಷಣೆಯಷ್ಟೇ ಅಲ್ಲ, ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವವರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಕಿರಣ್ ಸಲ್ಲಿಸುವ ಮನವಿಯಲ್ಲಿ ಆಗ್ರಹಿಸಿದ್ದಾನೆ. ಈಗಾಗಲೇ 16 ಜಿಲ್ಲೆಗಳನ್ನು ಸುತ್ತಾಡಿರುವ ಈತ, 17ನೇ ಜಿಲ್ಲೆಯಾದ ಕಾರವಾರಕ್ಕೆ ಶುಕ್ರವಾರ ಆಗಮಿಸಿ, ಹಾವೇರಿಯತ್ತ ಪಯಣ ಬೆಳಸಿದ.
ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಯಾಗಿರುವ ಕಿರಣ್, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಂದಾಗಿ ಮನನೊಂದು ಈ ಯಾತ್ರೆಗೆ ಮುಂದಾಗಿದ್ದಾನೆ. ಆಗಸ್ಟ 22 ರಿಂದ ಬೆಂಗಳೂರಿನಿಂದ ಹೊರಟಿದ್ದ ಈತ, ಈಗಾಗಲೇ ಮನೆ ಬಿಟ್ಟು 40 ದಿನಗಳಾಗಿವೆ. ಪ್ರತಿದಿನ ಸುಮಾರು 100 ಕಿ.ಮೀ.ನಷ್ಟು ದೂರವನ್ನು ಕ್ರಮಿಸುತ್ತಿದ್ದಾನೆ. ಯಾತ್ರೆಗಾಗಿ ಹೊಸ ಹರ್ಕ್ಯುಲಸ್ ಸೈಕಲ್ ಖರೀದಿಸಿರುವ ಕಿರಣ್, ತನ್ನ ಹಾಗೂ ತನ್ನ ತಂದೆ- ತಾಯಿ ಕೊಟ್ಟ ಹಣದಲ್ಲೇ ಅಖಂಡ ಕರ್ನಾಟಕ ಸುತ್ತುತ್ತಿದ್ದಾನೆ. ಒಮ್ಮೊಮ್ಮೆ ರಾತ್ರಿ ಹೋಟೆಲ್ ಲಾಡ್ಜ್ ಗಳಲ್ಲಿ ಈತ ತಂಗುತ್ತಾನೆ. ಊಟವನ್ನೂ ಅಲ್ಲೇ ಮಾಡುತ್ತಾನೆ. ಆದರೆ ಸೈಕಲ್ ನಲ್ಲಿ ಟೆಂಟ್ ಅನ್ನು ಕೂಡ ತಂದಿರುವ ಕಿರಣ್, ಸ್ಥಳಾವಕಾಶ ದೊರೆತಲ್ಲಿ ಟೆಂಟ್ ಹಾಕಿ ಆ ದಿನ ರಾತ್ರಿ ಕಳೆಯುತ್ತಾರೆ. ಇನ್ನು ರಸ್ತೆಯಲ್ಲಿ ಸಿಗುವ ಕೆಲವರು ಕೂಡಿಸುವ ಊಟ- ತಿಂಡಿಯನ್ನೂ ಸ್ವೀಕರಿಸುತ್ತಾರೆ.
ಕಿರಣ್ ಸೈಕಲ್ ಯಾನಕ್ಕೆ ಕೊಟ್ಟ ಕಾರಣ :
ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಅತ್ಯಾಚಾರಗಳು ನನ್ನ ಮನಸ್ಸಿಗೆ ಘಾಸಿಯುಂಟು ಮಾಡಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಸೈಕಲ್ ಯಾತ್ರೆ ಹೊರಡಲು ಯೋಜಿಸಿ, ಗೆಳೆಯರೊಂದಿಗೆ ಮಾತುಕತೆ ನಡೆಸಿದೆ. ಕೆಲವರು ತಮಗೆ ಬರಲಾಗದಿದ್ದರೂ ಬೆಂಬಲ ನೀಡಿದರು. ಆದರೆ ಇನ್ನು ಕೆಲವರು, ‘ಯಾಕೆ ಸುಮ್ನೆ ತಿರ್ಗ್ತೀಯಾ? ಮನೇಲ್ಲಿರು. ಇದೆಲ್ಲಾ ಆಗದ ಹೋಗದ ಕೆಲಸ ‘ ಎಂದರು . ಆದರೆ ನನ್ನ ದೇಶಕ್ಕಾಗಿ ಮಹಿಳೆಯನ್ನು ಮಾತಲ್ಲಿ ಮಾತ್ರ ಪೂಜಿಸುತ್ತದೆ. ವಾಸ್ತವ ಬೇರೆಯೇ ಇದೆ ಅನ್ನಿಸಿತು. ಮಹಿಳೆಯರ ರಕ್ಷಣೆಗಾಗಿ ಯಾರಿಗಾಗಿಯೂ ಕಾಯದೇ ಒಬ್ಬಂಟಿಯಾಗಿ ಸೈಕಲ್ ಯಾತ್ರೆ ಶುರು ಮಾಡಿದೆ. ಈಗ ರಾಜ್ಯದಾದ್ಯಂತ ಬೆಂಬಲ ಸಿಗುತ್ತಿದೆ. ಇನ್ಟ್ಸ್ಟಾಗ್ರಾಂನಲ್ಲಿ ಪ್ರತಿದಿನ ಕೂಡ ಒಬ್ಬರಲ್ಲಾ ಒಬ್ಬರು ಮೆಸೇಜ್ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುತ್ತಾರೆ . 14000 ಜನ ಬೆಂಬಲಿಸಿದ್ದಾರೆಂದು ಖುಷಿಯಿಂದಲೇ ಹೇಳಿದ.
ಇತ್ತೀಚಿಗೆ ಭಾರೀ ಸುದ್ದಿಯಾದ ಮೈಸೂರು ಗ್ಯಾಂಗ್ ರೇಪ್ ಪ್ರಕರಣ ನಡೆದಿದ್ದು ಆಗಸ್ಟ 24ಕ್ಕೆ. ಆದರೆ ಘಟನೆಯ ಎರಡು ದಿನಕ್ಕೂ ಮುನ್ನ, ಅಂದರೆ , ಅಗಸ್ಟ 22ರಂದೇ ಕಿರಣ್ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಯಾತ್ರೆ ಪ್ರಾರಂಭಿಸಿದ್ದ. ಇನ್ನು ಯಾತ್ರೆಯ ಕೊನೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿ ಒತ್ತಾಯಿಸುವುದಾಗಿಯೂ ಕಿರಣ್ ಹೇಳಿದರು.
PIC CREDIT TO UDAYAVANI NEWS