ಶಿರಸಿ: ಕಾಂಗ್ರೆಸ್ ಸಭೆಯಲ್ಲಿ ಆರ್.ವಿ.ದೇಶಪಾಂಡೆ ಹಾಗೂ ಘೋಟ್ನೇಕರ್ ಬೆಂಬಲಿಗರು ಗೊಂದಲ ಸೃಷ್ಟಿಸಿದ ಘಟನೆ ಶಿರಸಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್ನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಭೆಯಲ್ಲಿ ಘೋಟ್ನೇಕರ್ ಹಾಗೂ ಆರ್.ವಿ.ದೇಶಪಾಂಡೆ ಬೆಂಬಲಿಗರ ನಡುವೆ ಜಯಘೋಷದ ಗೊಂದಲ ಏರ್ಪಟ್ಟಿತು. ಭಾಷಣದ ವೇಳೆ ಹಳಿಯಾಳದ ರಾಜಕೀಯ ಸ್ಥಿತಿ ವಿವರಿಸಿ ದೇಶಪಾಂಡೆ ಹಾಗೂ ಬ್ಲಾಕ್ ಅಧ್ಯಕ್ಷರ ವಿರುದ್ಧ ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್ ಪರೋಕ್ಷ ವಾಗ್ದಾಳಿ ನಡೆಸಿದ್ರು. ಈ ಮಧ್ಯೆ ಆರ್.ವಿ.ದೇಶಪಾಂಡೆಗೆ ಜಯವಾಗಲಿ ಅಂತ ದೇಶಪಾಂಡೆ ಬೆಂಬಲಿಗರೊಬ್ಬರು ಘೋಷಣೆ ಕೂಗಿದ್ರು. ಪ್ರತಿಯಾಗಿ ಘೋಟ್ನೇಕರ್ಗೆ ಜಯವಾಗಲಿ ಅಂತ ಘೋಟ್ನೆಕರ್ ಬೆಂಬಲಿಗರು ಘೋಷಣೆ ಕೂಗಿದ್ರು.
ಇದರಿಂದಾಗಿ ಕೆಲ ಕಾಲ ಸಭೆಯಲ್ಲಿ ಗೊಂದಲ ನಿರ್ಮಾಣವಾಯಿತು. ಇದನ್ನು ನೋಡಿ ಕಾಂಗ್ರೆಸ್ ರಾಜ್ಯ ಮುಖಂಡರು ಹಾಗೂ ಸಭಿಕರು ಮುಜುಗರಕ್ಕೀಡಾದರು. ನಂತರ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಎಲ್ಲರನ್ನೂ ಸಮಾಧಾನಪಡಿಸಿ ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ ಅಂತ ಘೋಷಣೆ ಹಾಕೋ ಮೂಲಕ ಗೊಂದಲದ ವಾತಾವರಣ ತಿಳಿಗೊಳಿಸಿದ್ರು.
Laxmi News 24×7