ಬೆಂಗಳೂರು: ಪಕ್ಷದ ಸಾಮೂಹಿಕ ನಾಯಕತ್ವದಲ್ಲಿ ಉಪಚುನಾವಣೆ ಎದುರಿಸಲಿದ್ದು, ಹಾನಗಲ್ ಹಾಗೂ ಸಿಂಧಗಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಎರಡು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಈಗಾಗಲೇ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಉಪ ಚುನಾವಣೆ ಕುರಿತು ಚರ್ಚೆ ನಡೆಸಲಾಗಿದ್ದು, ಅಭ್ಯರ್ಥಿಗಳ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.
ಇನ್ನು ಉದಾಸಿ ಹಾನಗಲ್ ನಲ್ಲಿ 6 ಬಾರಿ ಶಾಸಕರಾಗಿ ಆಯ್ಕೆಯಾದವರು. ಅವರ ಅಭಿವೃದ್ಧಿ ಕಾರ್ಯಗಳೇ ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಹಾಗೆ ಸಿಂಧಗಿಯಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. ಬೂತ್ ಮಟ್ಟದಲ್ಲಿ ನಮ್ಮ ಕಾರ್ಯಕರ್ತರಿದ್ದು, ಎರಡೂ ಕ್ಷೇತ್ರಕ್ಕೂ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು. ಅದಲ್ಲದೆ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಕ್ಕೆ ವೀಕ್ಷಕರನ್ನು ಕಳುಹಿಸುತ್ತೇವೆ. ಅವರು ಸ್ಥಳೀಯರ ಅಭಿಪ್ರಾಯವನ್ನು ಸಂಗ್ರಹಿಸಿ ಬಳಿಕ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸಿ.ಎಂ ಹೇಳಿದರು.