ಬೆಂಗಳೂರು: ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ, ಕಾಂಗ್ರೆಸ್ ಅಭ್ಯರ್ಥಿಯನ್ನ ಘೋಷಣೆ ಮಾಡಿದೆ. ಅಶೋಕ್ ಮನಗೂಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಘೋಷಣೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಈಶ್ವರ್ ಖಂಡ್ರೆ, ಹಾನಗಲ್ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಪಕ್ಷದ ವರಿಷ್ಠರು ಘೋಷಣೆ ಮಾಡಲಿದ್ದಾರೆ. ಈ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಹಾನಗಲ್ನಲ್ಲಿ ಮನೋಹರ್ ತಹಶಿಲ್ದಾರ್, ಶ್ರೀನಿವಾಸ್ ಮಾನೆ ಆಕಾಂಕ್ಷಿಗಳಾಗಿದ್ದಾರೆ. ಇವರಿಬ್ಬರಷ್ಟೇ ಅಲ್ಲ, ಇನ್ನು ಕೆಲವರೂ ಟಿಕೆಟ್ ಕೇಳಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷರು, ವಿಪಕ್ಷ ನಾಯಕರು ಹಾಗೂ ಹೈಕಮಾಂಡ್ ನಾಯಕರು ಅಭ್ಯರ್ಥಿ ಫೈನಲ್ ಮಾಡಲಿದ್ದಾರೆ. ಇಬ್ಬರನ್ನೂ ಕೂರಿಸಿ, ಮಾತನಾಡಿಸಿ ಯಾವುದೇ ಭಿನ್ನಮತ ಇಲ್ಲದಂತೆ ಟಿಕೆಟ್ ಫೈನಲ್ ಮಾಡ್ತೇವೆ. ಜೆಡಿಎಸ್ ಈ ಹಿಂದೆ ಬಿಜೆಪಿಗೆ ಸಹಾಯ ಮಾಡಿತ್ತು. ಬಸವಕಲ್ಯಾಣ, ಮಸ್ಕಿ ಉಪಚುನಾವಣೆ ವೇಳೆ ಬಿಜೆಪಿಗೆ ಸಹಾಯ ಮಾಡಿತ್ತು. ಈ ಬಾರಿ ನಾವು ನಮ್ಮ ಗೆಲುವಿನ ಬಗ್ಗೆ ಗಮನದಲ್ಲಿಟ್ಟುಕೊಂಡು ತಂತ್ರ ರೂಪಿಸುತ್ತೇವೆ ಎಂದರು.