ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ಬೆಲೆ ಏರಿಕೆ ವಿಚಾರ ಮತ್ತೆ ಪ್ರತಿಧ್ವನಿಸಿದ್ದು, ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಪರಸ್ಪರ ವಾಕ್ಸಮರ, ವಾಗ್ದಾಳಿಗಳಿಗೆ ಕಾರಣವಾಗಿದೆ.
ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಉತ್ತರಿಸಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದು ನಿಜ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ ಆದರೆ ಅದಕ್ಕೆ ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆಯಾಗಿರುವುದು ಮಾತ್ರ ಕಾರಣವಲ್ಲ, ಬೇರೆ ಬೇರೆ ಕಾರಣಗಳಿಂದ ಬೆಲೆ ಏರಿಕೆಯಾಗಿದೆ. ಸಿದ್ದರಾಮಯ್ಯನವರು ದೋಸೆ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ. ದೋಸೆ, ಇಡ್ಲಿಯನ್ನು ನಾನು ತರಿಸಿದ್ದೇನೆ. 4 ರೂಪಾಯಿ ಹೆಚ್ಚಳವಾಗಿದೆ. ಇದಕ್ಕೆ ಪೆಟ್ರೋಲ್ ಬೆಲೆ ಏರಿದ್ದು ಕಾರಣನಾ? ಎಂದು ಕಾಂಗ್ರೆಸ್ ನಾಯಕರಿಗೆ ತಿವಿದಿದ್ದಾರೆ.
ಈ ವೇಳೆ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಸದಸ್ಯರು ಬಿಜೆಪಿಯದ್ದು ಲೂಟಿ ಸರ್ಕಾರ ಎಂದು ಘೋಷಣೆ ಕೂಗಲು ಆರಂಭಿಸಿದರು. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಧ್ವನಿಗೂಡಿಸಿ ‘ಬಿಜೆಪಿ ಲೂಟ್ ಸರ್ಕಾರ’ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ, ಜನಸಾಮಾನ್ಯರು ಪರದಾಡುತ್ತಿದ್ದರೂ ಪ್ರಧಾನಿ ಮೋದಿಗೆ ನೋವಾಗುತ್ತಿಲ್ಲ. ಜನರನ್ನು ಲೂಟಿ ಮಾಡುವುದರಲ್ಲಿ ಬಿಜೆಪಿ ನಾಯಕರು ತೊಡಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಮಾತಿಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ಯಾರದ್ದು ಲೂಟಿ ಸರ್ಕಾರ? ಕಾಂಗ್ರೆಸ್ ಸರ್ಕಾರವನ್ನು ‘ಕ್ರಿಮಿನಲ್ ಲೂಟ್’ ಎಂದು ಕರೆಯಲಾಗಿತ್ತು. ‘ಕ್ರಿಮಿನಲ್ ಲೂಟ್’ ಎಂದರೆ ನಿಮಗೆ ನೋವಾಗುತ್ತೆ ಎನ್ನುವುದಾದರೆ ‘ಕಾಂಗ್ರೆಸ್ ಲೂಟ್’ ಎನ್ನೋಣ. ಲೂಟಿ ಮಾಡಿದ್ದು ನೀವು. ನಿಮ್ಮದು ಲೂಟಿ ಸರ್ಕಾರ. ಹೀಗಿರುವಾಗ ನಮಗೆ ಬುದ್ಧಿವಾದ ಹೇಳಲು ಬರಬೇಡಿ ಇದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ. ಕಾಂಗ್ರೆಸ್ ಅವಧಿಯಲ್ಲಿ ಶೇ 60ರಷ್ಟು ಬೆಲೆ ಏರಿಕೆ ಮಾಡಿದ್ದಾರೆ. ಈಗ ನಮ್ಮ ಅವಧಿಯಲ್ಲಿ ಶೇ.30ರಷ್ಟು ಬೆಲೆ ಏರಿಕೆಯಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಚಳುವಳಿ ಪ್ರಾಯೋಜಿತ ಚಳುವಳಿ. ಇಂತಹ ಸ್ಪಾನ್ಸರ್ ಚಳುವಳಿ ಮಾಡಿ ರೈತರಿಗೆ ಅವಮಾನ ಮಾಡಲಾಗುತ್ತಿದೆ. ಪಂಜಾಬ್, ಹರಿಯಾಣ ರೈತರದ್ದು ಎಂ ಎಸ್ ಪಿ ರಾಜಕಾರಣ. ನಿಮ್ಮ ಸರ್ಕಾರದ ಅವಧಿಯಲ್ಲಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ್ದರೆ ಪ್ರತಿಭಟನೆಗಳು ಯಾಕೆ ಆಗುತ್ತಿದ್ದವು? ಲೂಟಿ ನಡೆಸಿದ್ದು ಕಾಂಗ್ರೆಸ್ ಹೊರತು ಬಿಜೆಪಿಯಲ್ಲ ಎಂದು ಗುಡುಗಿದರು.
ಸಿಎಂ ಮಾತಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ-ಕೋಲಾಹಲ ಆರಂಭವಾಗುತ್ತಿದ್ದಂತೆ ಸ್ಪೀಕರ್ ಕಾಗೇರಿ ಕಲಾಪವನ್ನು ಮುಂದೂಡಿದರು.
Laxmi News 24×7