ಹುಬ್ಬಳ್ಳಿ, ಸೆ. 12: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮೇಯರ್ ಹಾಗೂ ಉಪಮೇಯರ್ ಗಾದಿಯನ್ನು ಬಿಜೆಪಿಯವರೇ ಅಲಂಕರಿಸಲಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ರವಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಎರಡು ಬಾರಿ ಆಡಳಿತ ನಡೆಸಿದೆ. ಈ ಬಾರಿಯೂ ಜನರ ಆಶೀರ್ವಾದದಿಂದಾಗಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದರು.
ನಮ್ಮ ಪಕ್ಷದ ಜನಪ್ರತಿನಿಧಿಗಳು ತಮ್ಮ ವಿಶೇಷ ಮತ ಹಾಕುವುದರಿಂದ ಬಿಜೆಪಿ 45 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ. ಅಲ್ಲದೆ, ಪಕ್ಷೇತರರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಮೇಯರ್ ಹಾಗೂ ಉಪಮೇಯರ್ ನಮ್ಮ ಪಕ್ಷದವರೇ ಆಗುವುದು ಖಚಿತ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು, ನಮ್ಮ ಪಕ್ಷದವರೇ ಮೇಯರ್ ಹಾಗೂ ಉಪಮೇಯರ್ ಆಗಲಿದ್ದಾರೆ. ಕಲಬುರ್ಗಿ ಮಹಾನಗರ ಪಾಲಿಕೆಯಲ್ಲೂ ಬಿಜೆಪಿ ಪಕ್ಷದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಜೆಡಿಎಸ್ ಪಕ್ಷದ ಬೆಂಬಲ ಪಡೆಯುವ ನಿಟ್ಟಿನಲ್ಲಿ ಮಾತುಕತೆಗಳು ನಡೆದಿದ್ದು, ಕಲಬುರ್ಗಿಯಲ್ಲೂ ನಾವೇ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಮ್ಮ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುವ ಬದಲು, ನಾವು ಚುನಾವಣೆಯಲ್ಲಿ ಯಾವ ರೀತಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದೇವೆ ಎಂಬುದನ್ನು ಸಾಬೀತುಪಡಿಸಲಿ. ಸುಖಾಸುಮ್ಮನೆ ರಾಜಕೀಯವಾಗಿ ಆರೋಪಗಳನ್ನು ಮಾಡುವುದು ಬೇಡ ಎಂದು ಜಗದೀಶ್ ಶೆಟ್ಟರ್ ತಿರುಗೇಟು ನೀಡಿದರು.