Breaking News

ಸ್ಮಾರ್ಟ್‌ ಸಿಟಿ ಕಾಮಗಾರಿ ವರ್ಷದಲ್ಲಿ ಪೂರ್ಣ: ಗೋವಿಂದ ಕಾರಜೋಳ

Spread the love

ಬೆಳಗಾವಿ: ‘ನಗರದಲ್ಲಿ ಸ್ಮಾರ್ಟ್‌ ಸಿಟಿ ಕೆಲಸಗಳನ್ನು ಇನ್ನೊಂದು ವರ್ಷದಲ್ಲಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

‘ಕೇಂದ್ರ ಮತ್ತು ರಾಜ್ಯದಲ್ಲಿನ ನಮ್ಮ ಸರ್ಕಾರವು ಅನೇಕ ಜನಪರ ಯೋಜನೆಗಳಿಂದ ಜನರ ವಿಶ್ವಾಸ ಗಳಿಸಿದೆ. ರಾಜ್ಯದಲ್ಲಿ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾರಿಗೊಳಿಸಿದ ಅಭಿವೃದ್ಧಿ ಕಾರ್ಯಗಳು, ಇಲ್ಲಿನ ಎಲ್ಲ ನಾಯಕರು ಒಗ್ಗೂಡಿ ಶ್ರಮ ವಹಿಸಿದ ಪ್ರತಿಫಲದಿಂದ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ಪೌರಕಾರ್ಮಿಕ ಮಹಿಳೆಗೆ ಗೆಲುವು: ‘ಪೌರಕಾರ್ಮಿಕ ಮಹಿಳೆ ಸವಿತಾ ಕಾಂಬಳೆ ಅವರಿಗೆ ಟಿಕೆಟ್ ಕೊಟ್ಟಿದ್ದೆವು. ಜನರೆ ಖರ್ಚು-ವೆಚ್ಚ ನೋಡಿಕೊಂಡಿದ್ದರು. ಅವರು ಗೆದ್ದಿದ್ದಾರೆ. ಬಿಜೆಪಿಗೆ ಸಾಮಾಜಿಕ ಬದ್ಧತೆ ಇದೆ ಎನ್ನುವುದನ್ನು ಈ ಮೂಲಕ ತೋರಿಸಿದ್ದೇವೆ. ಗೆದ್ದವರಲ್ಲಿ ಐವರು ಒಬಿಸಿ, ನಾಲ್ವರು ಪರಿಶಿಷ್ಟ ಜಾತಿಯವರಿದ್ದಾರೆ. 20 ಪುರುಷ ಮತ್ತು 15 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ನಮ್ಮ ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಶಾಸಕ ಪಾಟೀಲ ಕ್ಷೇತ್ರದಲ್ಲಿ ಬಡವರಿಗೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಯೋಜನೆಗೆ ಸಾಕಷ್ಟು ಕ್ರಮ ವಹಿಸಿದ್ದಾರೆ. ಉಸ್ತುವಾರಿ ಸಚಿವನಾಗಿ ನಗರದ ಅಭಿವೃದ್ಧಿಗೆ ಬೇಕಾದ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದರು.

ಕಾಂಗ್ರೆಸ್ ವಿರುದ್ಧ ಟೀಕೆ: ‘ಸ್ವಾತಂತ್ರ್ಯ ನಂತರ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ನವರು ಬಹುಪಾಲು ಆಡಳಿತ ಮಾಡಿದರು. ಬೆಳಗಾವಿ ನಗರಕ್ಕೆ ಅವರ ಕಾಣಿಕೆ ಶೂನ್ಯ. ಯಾವ ಗಲ್ಲಿಗಳನ್ನೂ ಅವರು ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ. ಬೆಳಗಾವಿಯನ್ನು 2ನೇ ರಾಜಧಾನಿಯನ್ನಾಗಿ ಘೋಷಿಸದಿದ್ದರೂ ಹಾಗೆ ಅಭಿವೃದ್ಧಿಪಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ’ ಎಂದು ಹೇಳಿದರು.

‘ಕಲಬುರ್ಗಿ ಪಾಲಿಕೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದಕ್ಕೆ ಮಂತ್ರ ಸ್ಥಾನ ಸಿಕ್ಕಿಲ್ಲದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ’17 ಜನ ಶಾಸಕರು ರಾಜೀನಾಮೆ ಕೊಟ್ಟು ಬಂದಿದ್ದಾರೆ. ಅವರಲ್ಲಿ ಹೆಚ್ಚಿನವರಿಗೆ ಅವಕಾಶ ನೀಡಬೇಕಾದ್ದರಿಂದ ಕೆಲವು ಸಾರಿ ನಮ್ಮ ಲೆಕ್ಕಾಚಾರ ತಪ್ಪಿವೆ. ಮುಂದೆ ಎಲ್ಲವನ್ನೂ ಸರಿಪಡಿಸಲಾಗುವುದು. ಅವಕಾಶ ಬರುತ್ತದೆ. ಕಾಯಬೇಕು’ ಎಂದರು.

‘ಸುವರ್ಣ ವಿಧಾನಸೌಧಕ್ಕೆ ಕೆಲವು ಕಚೇರಿಗಳ ಸ್ಥಳಾಂತರಕ್ಕೆ ಮುಖ್ಯಮಂತ್ರಿ ಕ್ರಮ ವಹಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಮೇಯರ್‌-ಉಪ ಮೇಯರ್ ಚುನಾವಣೆ ನಿಗದಿಯಾದ ನಂತರ ಆ ಬಗ್ಗೆ ಚರ್ಚಿಸಲಾಗುವುದು’ ಎಂದರು.

ಸಂಸದೆ ಮಂಗಲಾ ಅಂಗಡಿ, ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ, ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ, ನಗರಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ಮುಖಂಡರಾದ ರಮೇಶ ದೇಶಪಾಂಡೆ ಮತ್ತು ರಾಜೇಂದ್ರ ಹರಕುಣಿ ಇದ್ದರು.

’10 ದಿನಗಳಿಗೆ ಅನುಮತಿ’: ‘ಬೆಳಗಾವಿಯಲ್ಲಿ 10 ದಿನಗಳ ಗಣೇಶೋತ್ಸವ ಆಚರಣೆಗೆ ಅನುಮತಿ ಸಿಗಲಿದೆ. ಈ ನಿಟ್ಟಿನಲ್ಲಿ ಹಿಂದೂ ಸಂಘಟನೆಗಳವರು ಸೇರಿ ಎಲ್ಲರ ಒತ್ತಾಯವೂ ಇದೆ. ಸೋಮವಾರ ಸರ್ಕಾರದಿಂದ ಪರಿಷ್ಕೃತ ಆದೇಶ ಹೊರಬೀಳಲಿದೆ. 10 ದಿನಗಳ ಉತ್ಸವ ಆಚರಣೆಗೆ ಅವಕಾಶ ಮಾಡಿಕೊಡಲಾಗುವುದು’ ಎಂದು ಕಾರಜೋಳ ಪ್ರತಿಕ್ರಿಯಿಸಿದರು.

ಕ್ರಮ ವಹಿಸಲಿ

ಬೆಳಗಾವಿ ಸುತ್ತಮುತ್ತ 16 ತಳಿಯ ಮಾವು ಬೆಳೆಯಲಾಗುತ್ತದೆ. ಹೀಗಾಗಿ, ಫುಡ್ ಪಾರ್ಕ್ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲು ಶಾಸಕರು ಕ್ರಮ ವಹಿಸಬೇಕು.

– ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ


Spread the love

About Laxminews 24x7

Check Also

ಸರ್ಕಾರಿ ವೈದ್ಯರು, ನರ್ಸ್​ಗಳಿಗೆ ಗ್ರಾಮೀಣ ಸೇವೆ ಕಡ್ಡಾಯ

Spread the loveಬೆಂಗಳೂರು: ನಗರ ಪ್ರದೇಶಗಳಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್​ಗಳು ಸೇರಿದಂತೆ ಇತರ ಸಿಬ್ಬಂದಿ ಇನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ