ಬೆಂಗಳೂರು: ಸಿಲಿಕಾನ್ ಸಿಟಿಯ ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮತ್ತು ಕುಟುಂಬಕ್ಕೆ ಸರ್ಕಾರ ಪೊಲೀಸ್ ಭದ್ರತೆಯನ್ನು ಒದಗಿಸಿದೆ.ಶಾಸಕರ ಕುಟುಂಬ ಸದ್ಯ ಖಾಸಗಿ ಹೊಟೇಲ್ ನಲ್ಲಿ ವಾಸವಾಗಿದೆ. ಜೀವಕ್ಕೆ ಅಪಾಯ ಇರುವ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ನೀಡಿದ್ದಾರೆ. ಅಲ್ಲದೆ ಸದ್ಯಕ್ಕೆ ತಮ್ಮ ನಿವಾಸಕ್ಕೆ ಹೋಗೋದು ಬೇಡ ಅಂತ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಸ್ವಲ್ಪ ದಿನ ಹೊಟೇಲ್ ನಲ್ಲಿ ಉಳಿಯಲು ಶಾಸಕ ಅಖಂಡ ನಿರ್ಧಾರ ಮಾಡಿದ್ದು, ಶಾಸಕರು ಸದ್ಯ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ಡಿಜೆ ಹಳ್ಳಿಯ ಗಲಭೆ ಪ್ರಕರಣದಲ್ಲಿ ಹಲವು ಪೊಲೀಸರಿಗೆ ಗಾಯಗಳಾಗಿದ್ದು, ಸಿಬ್ಬಂದಿ ಯೋಗಕ್ಷೇಮ ವಿಚಾರಿಸಲು ಅಲೋಕ್ ಕುಮಾರ್ ಕೆಜೆ ಹಳ್ಳಿ ಪೊಲೀಸ್ ಠಾಣೆಗೆ ಬುಧವಾರ ಭೇಟಿ ನೀಡಿದ್ದಾರೆ. ಕೆಜೆ ಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಾದ ಹಾನಿಯ ಬಗ್ಗೆ ಇಂಚಿಂಚು ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆ ಕುರಿತು ಸಿಬ್ಬಂದಿಯನ್ನು ಪ್ರಶ್ನಿಸಿದ್ದು, ಘಟನೆ ವಿವರ ಪಡೆದಿದ್ದಾರೆ. ಈ ವೇಳೆ ಸಿಬ್ಬಂದಿಗೆ ಎಚ್ಚರದಿಂದಿರುವಂತೆ ಸೂಚನೆಯನ್ನೂ ನೀಡಿದ್ದಾರೆ.
ಸಣ್ಣಪುಟ್ಟ ಗಾಯಗಳಾಗಿದ್ದವರು ಈಗಾಗಲೇ ಡಿಸ್ಚಾರ್ಜ್ ಆಗಿದ್ದು, ಕೆಜೆ ಹಳ್ಳಿ, ಡಿಜೆ ಹಳ್ಳಿ ಸುತ್ತ 50 ಕೆಎಸ್‍ಆರ್‍ಪಿ ತುಕಡಿ ನಿಯೋಜಿಸಲಾಗಿದೆ. ಸಂಪೂರ್ಣ ಭದ್ರತೆ ಕಲ್ಪಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ