ಹೈದರಾಬಾದ್: ಪತಿ ಪತ್ನಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಆರ್ಥಿಕ ಸಂಕಷ್ಟದಿಂದಾಗಿ ಮಹಿಳೆಯೊಬ್ಬರು ತನ್ನ 2 ತಿಂಗಳ ಕಂದಮ್ಮನನ್ನು 45 ಸಾವಿರ ರೂ. ಗೆ ಮಾರಾಟ ಮಾಡಿರುವ ಅಮಾನವೀಯ ಘಟನೆ ಹೈದರಾಬಾದ್‍ನ ಸುಭಾನ್‍ಪುರ್ ಪ್ರದೇಶದಲ್ಲಿ ನಡೆದಿದೆ.
ಮಹಿಳೆಯನ್ನು ಝೋಯಾ ಖಾನ್ ಎಂದು ಗುರುತಿಸಲಾಗಿದೆ. ಆಗಸ್ಟ್ 11 ರಂದು ಅಬ್ದುಲ್ ಮುಜಾಹೇದ್ ಎಂಬ ವ್ಯಕ್ತಿ ಹಬೀಬ್ ನಗರ ಪೊಲೀಸ್ ಠಾಣೆಗೆ ಬಂದು ತನ್ನ ಪತ್ನಿ ಮಗುವನ್ನು ಮಾರಿರುವುದಾಗಿ ದೂರು ನೀಡಿದ್ದ. ಅಲ್ಲದೆ ತಮ್ಮ ಮಗುವನ್ನು ಮೊಹಮ್ಮದ್ ಹಾಗೂ ತಬಸ್ಸುಮ್ ಬೇಗಂಗೆ 45 ಸಾವಿರಕ್ಕೆ ಮಾರಾಟ ಮಾಡಲಾಗಿದೆ ಎಂದು ದೂರಿದ್ದಾನೆ.
ದೂರು ದಾಖಲಿಸಿಕೊಂಡ ಪೊಲೀಸರು ಮಹಿಳೆ ಝೋಯಾ ಖಾನ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಆರ್ಥಿಕ ಸಂಕಷ್ಟದಿಂದಾಗಿ ಮಗು ಮಾರಾಟ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಆಗಸ್ಟ್ 3ರಂದು ಮುಜಾಹೇದ್ ತನ್ನ ಪತ್ನಿಯೊಂದಿಗೆ ಜಗಳವಾಡಿ ಹೆತ್ತವರ ಮನೆಗೆ ತೆರಳಿದ್ದನು. ಮನೆಯಲ್ಲಿದ್ದ ತನಗೆ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಬೇರೆದಾರಿ ಕಾಣದೇ 2 ತಿಂಗಳ ಮಗುವನ್ನು 45 ಸಾವಿರ ರೂಗೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾಳೆ.
ವಾರದ ಬಳಿಕ ಬಂದ ಪತಿ ಮಗು ಎಲ್ಲಿ ಎಂದು ಕೇಳಿದ್ದಾನೆ. ಆಗ ಪತ್ನಿ ಮಗುವನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾಳೆ. ಸಾಕಷ್ಟು ಹುಡುಕಾಟ ನಡೆಸಿದರೂ ಮಗು ಸಿಗದಿದ್ದಾಗ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.