ಹುಬ್ಬಳ್ಳಿ: ಕಾಂಗ್ರೆಸ್ ಏನು ಮಾಡಿದೆ ಎಂದು ಹೋದಲ್ಲಿ ಬಂದಲ್ಲಿ ಆರೋಪಿಸುವ ಬಿಜೆಪಿಯವರು, ದೇಶದ ಹಿತ ದೃಷ್ಟಿಯಿಂದ ಕಾಂಗ್ರೆಸ್ ಅಧಿಕಾರದಲ್ಲಿ ಕೈಗೊಂಡ ಸಾರ್ವಜನಿಕ ಆಸ್ತಿ-ಉದ್ಯಮಗಳನ್ನು ಖಾಸಗಿಯವರ ಪಾಲಾಗಿಸಲು ಮುಂದಾಗಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಆರೋಪಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹೆದ್ದಾರಿ, ರೈಲ್ವೆ, ಹಡಗು, ವಿಮಾನ ನಿಲ್ದಾಣ, ವೇರ್ ಹೌಸ್, ಗಣಿಗಳು, ನೈಸರ್ಗಿಕ ಅನಿಲ ಹೀಗೆ ಎಲ್ಲವನ್ನು ಖಾಸಗಿಯವರ ತೆಕ್ಕೆಗೆ ನೀಡಲು ಮುಂದಾಗಿದೆ. ಅಂಬಾನಿ, ಅದಾನಿ ಕಂಪೆನಿಗಳಿಗೆ ಸಾರ್ವಜನಿಕ ವಲಯ ಉದ್ಯಮ, ಸೇವಾ ಕ್ಷೇತ್ರಗಳನ್ನು 40 ವರ್ಷಗಳವರೆಗೆ ನೀಡಲು ಮುಂದಾಗಿದೆ. ನೀತಿ ಆಯೋಗ ಹೇಳಿಕೆಯಂತೆ ಇದರಿಂದ ಸುಮಾರು 6 ಲಕ್ಷ ಕೋಟಿ ರೂ. ಬರುತ್ತದೆ ಎಂಬುದಾಗಿದೆ. ಕಾಂಗ್ರೆಸ್ ಪಕ್ಷ 70 ವರ್ಷಗಳಲ್ಲಿ ಸೃಷ್ಟಿಸಿದ ಆಸ್ತಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ 7 ವರ್ಷಗಳಲ್ಲಿ ಖಾಸಗಿ ಪಾಲು ಮಾಡಲು ಹೊರಟಿದೆ. ಲಾಭದಾಯಕ ಉದ್ಯಮ ಗಳನ್ನು ಖಾಸಗಿ ಪಾಲು ಮಾಡುವುದರ ವಿರುದ್ದ ಜನ ಜಾಗೃತಿಗೊಳ್ಳಬೇಕಿದೆ ಎಂದರು.
ಹುಬ್ಬಳ್ಳಿ ಧಾರವಾಡದಲ್ಲೂ ಬಿಜೆಪಿ ಆಡಳಿತ ದುಸ್ಥಿತಿ ಸೃಷ್ಟಿಸಿದೆ. ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ನೀಡಲಾಗಿಲ್ಲ. ಹತ್ತು ವರ್ಷ ಪಾಲಿಕೆಯಲ್ಲಿ ಆಡಳಿತ ನಡೆಸಿದ ಬಿಜೆಪಿ, ತಮ್ಮ ಬೇಡಿಕೆ, ನಿರೀಕ್ಷಗಳಿಗೆ ಸ್ಪಂದಿಸಿಲ್ಲ ಎಂಬುದು ಜನರ ಆಕ್ರೋಶವಾಗಿದೆ. ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದರು.