ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿನೋಬ ನಗರದಲ್ಲಿನ ನಿವಾಸಕ್ಕೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಚರ್ಚಿಸಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮೊದಲ ಬಾರಿ ತವರು ಜಿಲ್ಲೆಗೆ ಬಂದಿರುವ ಯಡಿಯೂರಪ್ಪ ಅವರ ಜತೆ ಉಪಾಹಾರ ಸೇವಿಸುತ್ತಾ ಅರ್ಧ ತಾಸು ಮಾತುಕತೆ ನಡೆಸಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ತಮ್ಮ ಗಮನಕ್ಕೆ ತಾರದೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ನೇರವಾಗಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ಈಶ್ವರಪ್ಪ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು. ನಂತರ ಇಬ್ಬರೂ ವೇದಿಕೆ ಹಂಚಿಕೊಂಡರೂ, ಪರಸ್ಪರ ಮುಖಕೊಟ್ಟು ಮಾತನಾಡುತ್ತಿರಲಿಲ್ಲ. ಈಗ ಇಬ್ಬರೂ ನಾಯಕರ ಭೇಟಿ ಕಾರ್ಯಕರ್ತರಲ್ಲಿ ಹಮ್ಮಸ್ಸು ತಂದಿತ್ತು.
ಇದೇ ಸಮಯದಲ್ಲಿ ಮನವಿ ಸಲ್ಲಿಸಲು ಬಂದಿದ್ದ ಶಿವಮೊಗ್ಗ ವೈದ್ಯಕೀಯ ಕಾಲೇಜು ಗುತ್ತಿಗೆ ಸಿಬ್ಬಂದಿ ಸಮಸ್ಯೆ ಬಗೆಹರಿಸುವಂತೆ ಯಡಿಯೂರಪ್ಪ ಅವರು ಸಚಿವರಿಗೆ ಸೂಚಿಸಿದರು.
‘ಭೇಟಿಯಲ್ಲಿ ವಿಶೇಷವಿಲ್ಲ. ನಾವಿಬ್ಬರೂ ಅಣ್ಣತಮ್ಮಂದಿರಂತೆ ಇದ್ದೇವೆ. ಅವರ ಮನೆಗೆ ನಾವು ಹೋಗುತ್ತೇವೆ, ಅವರು ನಮ್ಮ ಮನೆಗೆ ಬರುತ್ತಾರೆ. ನಾವೆಲ್ಲಾ ಒಂದೆ’ ಎಂದಷ್ಟೇ ಈಶ್ವರಪ್ಪ ಪ್ರತಿಕ್ರಿಯಿಸಿದರು.