ಹುಬ್ಬಳ್ಳಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ಅಂದು ರಾಜೀನಾಮೆ ಘೋಷಣೆ ವೇಳೆ ಗದ್ಗದಿತರಾಗಿ ಕಣ್ಣೀರಿಟ್ಟರು ಇದಕ್ಕೆ ಕಾರಣವೇನು ಎಂಬುದು ನಮಗೆ ಗೊತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕೋವಿಡ್ ಸಂದರ್ಭದಲ್ಲಿ, ಆಕ್ಸಿಜನ್, ಬೆಡ್ ನಿರ್ವಹಣೆಗಳ ವಿಚಾರದಲ್ಲಿ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ಹಗರಣ ನಡೆದಿದೆ. ಕೋವಿಡ್ ನಿಂದ ಸಂಕಷ್ಟಕ್ಕೀಡಾದ ಜನ ಆಸ್ಪತ್ರೆ, ಆಂಬುಲೆನ್ಸ್ ಗಳಿಗಾಗಿ ಬೀದಿ ಬೀದಿಗಳಲ್ಲಿ ಕ್ಯೂ ನಿಂತಿದ್ದಾರೆ. ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಶಾಸಕ ಅರವಿಂದ್ ಬೆಲ್ಲದ್ ಅವರೇ ಹೇಳಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಹೇಳಿರುವಾಗ ನಂಬಲೇಬೇಕಲ್ಲವೇ? ಇದೇ ಕಾರಣಕ್ಕೆ ಸಿಎಂ ಬದಲಾವಣೆ ಮಾಡಲಾಯಿತು. ಅಧಿಕಾರ ತ್ಯಾಗ ಮಾಡುವಾಗ ಬಿಎಸ್ ವೈ ಕಣ್ಣೀರಿಟ್ಟರು. ಕಣ್ಣೀರಿಗೆ ಕಾರಣವೇನು ಎಂಬುದು ಗೊತ್ತು ಎಂದು ಹೇಳಿದರು.
ಇನ್ನು ಹುಬ್ಬಳ್ಳಿ-ಧಾರವಾಡ ಅವಳಿನಗರದ ಬದಲು ಗುಂಡಿಗಳ ನಗರವಾಗಿದೆ. ಇಲ್ಲಿನ ರಸ್ತೆಗಳಲ್ಲಿ ಒಂದು ರೌಂಡ್ ಹೋಗಿ ಬಂದರೆ ಡಾನ್ಸ್ ಕಲಿಯಬೇಕಿಲ್ಲ, ಕುಳಿತಲ್ಲೇ ಡಾನ್ಸ್ ಮಾಡಬಹುದು. ರಸ್ತೆ ರಿಪೇರಿ ಕಾರ್ಯವೂ ನಡೆದಿಲ್ಲ. ಸಿಎಂ ಆದ ಮೇಲೆ ಹುಬ್ಬಳ್ಳಿಯಲ್ಲಿ ಬೊಮ್ಮಾಯಿ ಮನೆ ಬೀದಿ ರಸ್ತೆ ರಿಪೇರಿ ನಡೆಯುತ್ತಿದೆ. 15 ವರ್ಷ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದರೂ ಯಾವ ಒಂದು ಕೆಲಸ ಮಾಡಿಲ್ಲ ಬಿಜೆಪಿ ಸುಳ್ಳಿನ ಸರಮಾಲೆಯನ್ನೇ ಹೆಣೆಯುತ್ತಿದೆ ಎಂದು ಕಿಡಿಕಾರಿದರು.