ರಾಮನಗರ: ‘ಲವ್ ಯೂ ರಚ್ಚು’ ಚಿತ್ರ ತಂಡದ ಆರು ಮಂದಿಗೆ ಇಲ್ಲಿನ ಜಿಲ್ಲಾ ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿತು.
ಚಿತ್ರದ ನಿರ್ದೇಶಕ ಶಂಕರ್, ನಿರ್ಮಾಪಕ ಗುರು ದೇಶಪಾಂಡೆ, ನಾಯಕ ಅಜಯ್ ರಾವ್, ಸಾಹಸ ನಿರ್ದೇಶಕ ವಿನೋದ್‌ಕುಮಾರ್, ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡೀಸ್ ಹಾಗೂ ಕ್ರೇನ್ ಚಾಲಕ ಮಹದೇವ ಅವರಿಗೆ ನ್ಯಾಯಾಧೀಶ ಸಿದ್ಧಲಿಂಗಪ್ರಭು ಜಾಮೀನು ನೀಡಿ ಆದೇಶಿಸಿದರು.
ಇದೇ ತಿಂಗಳ 9ರಂದು ಬಿಡದಿಯ ಜೋಗರಪಾಳ್ಯ ಸಮೀಪ ‘ಲವ್ ಯೂ ರಚ್ಚು’ ಚಿತ್ರೀಕರಣದ ಸಂದರ್ಭ ವಿದ್ಯುತ್ ಅವಘಡದಿಂದಾಗಿ ಚಿತ್ರದ ಸಾಹಸ ಕಲಾವಿದ ವಿವೇಕ್ ಮೃತಪಟ್ಟಿದ್ದರು. ಈ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಶಂಕರ್, ವಿನೋದ್ ಹಾಗೂ ಮಹದೇವ ಅವರನ್ನು ಬಂಧಿಸಿದ್ದು, ನ್ಯಾಯಾಧೀಶರು ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಸೆ.7ರವರೆಗೆ ವಿಸ್ತರಿಸಿದ್ದರು. ಈ ಮಧ್ಯೆ, ಜಾಮೀನು ನೀಡುವಂತೆ ಬಂಧಿತರು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ಇನ್ನಿತರ ಆರೋಪಿಗಳಾದ ಗುರು ದೇಶಪಾಂಡೆ ಹಾಗೂ ಫರ್ನಾಂಡೀಸ್ ತಲೆಮರಿಸಿಕೊಂಡಿದ್ದು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನಟ ಅಜಯ್ ರಾವ್ ಸಹ ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು.