ಬೆಂಗಳೂರು, ಆ.26- ಸಂಭಾವ್ಯ ಕೋವಿಡ್ ಮೂರನೆ ಅಲೆ ಹಿನ್ನೆಲೆಯಲ್ಲಿ ನಗರದ ವಾಣಿಜ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕು ಎಂದು ಬಿಬಿಎಂಪಿ ಅಧಿಕೃತ ಆದೇಶ ಹೊರಡಿಸಿದೆ. ಕೋವಿಡ್ ಹರಡುವಿಕೆ ನಿಯಂತ್ರಿಸಲು ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಹೊಟೇಲ್ ಮತ್ತು ಕಚೇರಿಗಳು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವುದರ ಜೊತೆಗೆ ತಮ್ಮದೇ ವೆಚ್ಚದಲ್ಲಿ ತಮ್ಮ ಸಿಬ್ಬಂದಿಗೆ ಶೇ.100ರಷ್ಟು ಲಸಿಕೆ ಕೊಡಿಸಬೇಕು.
ಮೊದಲ ಡೋಸ್‍ಅನ್ನು ಈ ತಿಂಗಳ 31ರೊಳಗೆ ಎಲ್ಲಾ ಸಿಬ್ಬಂದಿಗೂ ನೀಡಬೇಕು ಎಂದು ಬಿಬಿಎಂಪಿ ಆದೇಶದಲ್ಲಿ ಉಲ್ಲೇಖ ಮಾಡಿದ್ದು, ವಾಣಿಜ್ಯ ಚಟುವಟಿಕೆ ಸಂಸ್ಥೆಗಳು, ಕೈಗಾರಿಕೆಗಳು, ಕಚೇರಿಗಳು, ಹೊಟೇಲ್‍ಗಳಿಗೆ ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ.
ಖಾಸಗಿ ಕಂಪೆನಿಗಳು, ಕೈಗಾರಿಕೆಗಳು, ಹೊಟೇಲ್‍ಗಳು ಪಾಲಿಕೆಯ ನಿಯಮ ಪಾಲಿಸಿವೆಯೇ ಎಂದು ತಪಾಸಣೆ ಮಾಡಲು ಬಿಬಿಎಂಪಿ ಮಾರ್ಷಲ್‍ಗಳು ಮತ್ತು ಆರೋಗ್ಯಾಧಿಕಾರಿಗಳು ಮುಂದಿನ ತಿಂಗಳಿನಿಂದ ಕಚೇರಿಯ ಅವಧಿಯಲ್ಲಿ ತೆರಳಿ ತಪಾಸಣೆ ಮಾಡಲಿದ್ದಾರೆ. ಆದೇಶ ಉಲ್ಲಂಘಿಸಿರುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.