ಬೆಂಗಳೂರು : ಬಡ್ತಿ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ನೇರ ನೇಮಕಾತಿ ಹೊಂದಿರುವ ಮತ್ತು ಸೇವಾನಿರತ ಸರ್ಕಾರಿ ನೌಕರರು ಮುಂದಿನ ವರ್ಷದ ಮಾರ್ಚ್ 22 ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾಗದಿದ್ದಲ್ಲಿ ಮುಂಬಡ್ತಿ, ವಾರ್ಷಿಕ ಬಡ್ತಿ ಪಡೆಯಲು ಅನರ್ಹರಾಗಿರುತ್ತಾರೆ ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಕರ್ನಾಟಕ ಸಿವಿಲ್ ಸೇವಾ ನಿಯಮಗಳು 2012 ಅಡಿಯಲ್ಲಿ ನಿರ್ದಿಷ್ಟ ಹುದ್ದೆ ಹೊರತುಪಡಿಸಿ ಇನ್ನಿತರ ಎಲ್ಲ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸರ್ಕಾರ ಈಗಾಗಲೇ ಹಲವು ಬಾರಿ ಕಾಲಮಿತಿಯನ್ನು ವಿಸ್ತರಿಸಲಾಗಿದ್ದರೂ ಅನೇಕ ನೌಕರರು ಈ ಬಗ್ಗೆ ನಿರ್ಲಕ್ಷ್ಯ ಹೊಂದಿರುವ ಹಿನ್ನೆಲೆಯಲ್ಲಿ 2022 ರ ಮಾರ್ಚ್ 22 ರೊಳಗೆ ರಾಜ್ಯ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸ್ ಮಾಡುವಂತೆ ಸೂಚನೆ ನೀಡಿದೆ.