ಮೊಹಮ್ಮದ್ ಅರ್ಮಾನ್ ಮತ್ತು ಮೊಹಮ್ಮದ್ ಹುಸೇನಿ ಎಂಬ ಇಬ್ಬರು ಆರೋಪಿಗಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಆರ್ಯ ಹೆಸರು ಹೇಳಿಕೊಂಡು ಮಹಿಳೆಗೆ ಮೋಸ ಮಾಡಿರುವುದು ಇವರೇ ಎಂದು ಪೊಲೀಸರು ಶಂಕಿಸಿದ್ದಾರೆ.
ಜರ್ಮನಿಯಲ್ಲಿ ನೆಲೆಸಿರುವ ಶ್ರೀಲಂಕಾ ಮೂಲದ ತಮಿಳು ಮಹಿಳೆಗೆ ನಟ ಆರ್ಯ ಅವರು ಮೋಸ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ತಮ್ಮನ್ನು ಮದುವೆ ಆಗುವುದಾಗಿ ನಂಬಿಸಿ, ಲಕ್ಷಾಂತರ ರೂಪಾಯಿ ಹಣ ಪಡೆದು, ಬಳಿಕ ಮೋಸ ಮಾಡಿದ್ದಾರೆ ಎಂದು ಆರ್ಯ ಮೇಲೆ ಆ ಮಹಿಳೆ ಆರೋಪ ಹೊರಿಸಿದ್ದರು. ಅಲ್ಲದೇ, ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ನಿಜವಾದ ಆರೋಪಿಗಳನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ನಟ ಆರ್ಯ ನಿಟ್ಟುಸಿರು ಬಿಡುವಂತಾಗಿದೆ.
‘ಯುವರತ್ನ’ ಸಿನಿಮಾ ನಟಿ ಸಾಯೆಶಾ ಸೈಗಲ್ ಜೊತೆ ಆರ್ಯ ಅವರು ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಇತ್ತೀಚೆಗೆ ಈ ಜೋಡಿಗೆ ಮುದ್ದಾದ ಹೆಣ್ಣು ಮಗು ಜನಿಸಿದೆ. ಈ ನಡುವೆ ಆರ್ಯ ಮೇಲೆ ಗಂಭೀರ ಆರೋಪ ಕೇಳಿಬಂದಿರುವುದು ಅವರ ಅಭಿಮಾನಿಗಳಿಗೆ, ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಬೇಸರ ಮೂಡಿಸಿತ್ತು. ವಿಚಾರಣೆಗೆ ಹಾಜರಾಗುವಂತೆ ಆರ್ಯಗೆ ಚೆನ್ನೈ ಪೊಲೀಸರು ನೋಟೀಸ್ ಕೂಡ ನೀಡಿದ್ದರು.
ವಿಚಾರಣೆ ವೇಳೆ ಪೊಲೀಸರ ಪ್ರಶ್ನೆಗಳಿಗೆ ಆರ್ಯ ಸೂಕ್ತ ಉತ್ತರಗಳನ್ನು ನೀಡಿದ್ದರು. ‘ಆರ್ಯ ಹೆಸರನ್ನು ಬಳಸಿಕೊಂಡು ಆ ಮಹಿಳೆಗೆ ಯಾರೋ ಮೋಸ ಮಾಡಿರುವುದು ವಿಚಾರಣೆ ನಡೆಸಿದ ಬಳಿಕ ತಿಳಿದುಬಂದಿದೆ. ಶೀಘ್ರದಲ್ಲೇ ಅವರನ್ನು ಪತ್ತೆ ಹಚ್ಚಿ ಬಂಧಿಸುತ್ತೇವೆ’ ಎಂದು ಪೊಲೀಸರು ಹೇಳಿದ್ದರು. ಅದರಂತೆಯೇ ಶಂಕಿತರು ಮಹಿಳೆ ಜೊತೆ ಚಾಟ್ ಮಾಡಲು ಬಳಸಿದ್ದ ಮೊಬೈಲ್ ಅಥವಾ ಲ್ಯಾಪ್ಟಾಪ್ನ ಐಪಿ ಅಡ್ರೆಸ್ ಮೂಲಕ ಇಬ್ಬರನ್ನು ಬಂಧಿಸಲಾಗಿದೆ.
ಮೊಹಮ್ಮದ್ ಅರ್ಮಾನ್ ಮತ್ತು ಮೊಹಮ್ಮದ್ ಹುಸೇನಿ ಎಂಬ ಇಬ್ಬರು ಆರೋಪಿಗಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಆರ್ಯ ಹೆಸರು ಹೇಳಿಕೊಂಡು ಮಹಿಳೆಗೆ ಮೋಸ ಮಾಡಿರುವುದು ಇವರೇ ಎಂದು ಪೊಲೀಸರು ಶಂಕಿಸಿದ್ದಾರೆ. ಬುಧವಾರ (ಆ.25) ಇವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ. ಒಟ್ಟಾರೆ ಈ ಪ್ರಕರಣದಲ್ಲಿ ಆರ್ಯ ಕೈವಾಡ ಇಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಅವರ ಅಭಿಮಾನಿಗಳಿಗೆ ಸಮಾಧಾನ ಆಗಿದೆ.
ಈ ಕುರಿತು ಆರ್ಯ ಅವರು ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಗಂಭೀರ ಆರೋಪ ಕೇಳಿಬಂದರೂ ಕೂಡ ಇಷ್ಟು ದಿನ ಮೌನವಾಗಿದ್ದ ಅವರು ಈಗ ತುಟಿ ಬಿಚ್ಚಿದ್ದಾರೆ. ‘ನಿಜವಾದ ಅಪರಾಧಿಗಳನ್ನು ಬಂಧಿಸಿದ್ದಕ್ಕಾಗಿ ಪೊಲೀಸರಿಗೆ ಧನ್ಯವಾದಗಳು. ಇದು ನಿಜವಾದ ಮಾನಸಿಕ ಯಾತನೆ ಆಗಿತ್ತು. ನನ್ನನ್ನು ನಂಬಿದ ಎಲ್ಲರಿಗೂ ಪ್ರೀತಿಯ ಧನ್ಯವಾದಗಳು’ ಎಂದು ಆರ್ಯ ಟ್ವೀಟ್ ಮಾಡಿದ್ದಾರೆ.