ಬೆಂಗಳೂರು: ಬಿಬಿಎಂಪಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವೆಟರ್ ನೀಡದೇ ವಂಚನೆ ನಡೆಸಲಾಗಿದೆ ಎನ್ನುವ ಆರೋಪದಲ್ಲಿ ಸಂಬಂಧವಿಲ್ಲದೇ ತಮ್ಮ ಹಾಗೂ ಆರ್.ಅಶೋಕ್ ಅವರ ಹೆಸರನ್ನು ತೆಗೆದು ದಲಿತ ಸಂಘರ್ಷ ಸಮಿತಿ(ಡಿಎಸ್‌ಎಸ್) ಅಧ್ಯಕ್ಷ ಸಿ.ಎಸ್.ರಘು ಅವರು ಅಪಮಾನಿಸಿದ್ದಾರೆ. ಹೀಗಾಗಿ ಇವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿದ್ದೇನೆ ಎಂದು ನಟ ಜಗ್ಗೇಶ್ ಟ್ವೀಟ್ ಮೂಲಕ ಹೇಳಿದ್ದಾರೆ.
‘ಬಿಬಿಎಂಪಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವೆಟರ್‌ಗಳನ್ನು ಕರ್ನಾಟಕ ಕೈಮಗ್ಗ ನಿಗಮದಿಂದ (ಕೆಎಚ್‌ಡಿಸಿ) ಖರೀದಿಸಲಾಗಿದೆ. ಕೆಟಿಪಿಪಿ ಕಾಯ್ದೆಯ 4ಜಿ ಸೆಕ್ಷನ್ ಅಡಿ ವಿನಾಯಿತಿ ಪಡೆದು ಟೆಂಡರ್ ಕರೆಯದೆಯೇ ಸ್ವೆಟರ್ ಖರೀದಿಸಿ, ₹1.76 ಕೋಟಿ ಹಣ ಪಾವತಿಸಿ ಅಕ್ರಮ ನಡೆಸಲಾಗಿದೆ’ ಎಂದು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ರಘು ಆರೋಪಿಸಿದ್ದರು. ಅವ್ಯವಹಾರದ ಆರೋಪ ಮಾಡುವ ಸಂದರ್ಭದಲ್ಲಿ ನಟರಾದ ಕೋಮಲ್, ಜಗ್ಗೇಶ್ ಹಾಗೂ ಸಚಿವ ಆರ್.ಅಶೋಕ್ ಅವರ ಹೆಸರನ್ನೂ ರಘು ಪ್ರಸ್ತಾಪಿಸಿದ್ದರು.
ಈ ಕುರಿತು ಬುಧವಾರ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್, ‘ಇದು ನನಗೆ ಬಹಳ ನೋವುಂಟು ಮಾಡಿದೆ. ಹಾಗಾಗಿ ಸಂಬಂಧವಿಲ್ಲದೆ ನನ್ನ ಬಗ್ಗೆ ಸುಳ್ಳು ಆಪಾದನೆ ಮಾಡಿರುವ ರಘು ಅವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿರುವೆ. ದಯಮಾಡಿ ಯಾರೇ ಆಗಲಿ ಸತ್ಯ ಅರಿತು ನುಡಿಯುವ ಗುಣ ಬೆಳಸಿಕೊಳ್ಳಿ’ ಎಂದಿದ್ದಾರೆ.
ಈ ಟ್ವೀಟ್‌ಗೂ ಮೊದಲು ಮತ್ತೊಂದು ಟ್ವೀಟ್ ಮಾಡಿದ್ದ ಜಗ್ಗೇಶ್ ಅವರು, ‘ನಾನು ಉತ್ತಮ ಎಂದು ಅಧಮರಿಗೆ ಎದೆಬಗೆದು ವ್ಯರ್ಥ ತೋರಿಕೆ ಏಕೆಬೇಕು. ಆನೆ ರಾಜಮಾರ್ಗದಲ್ಲಿ ಆಗಲಿ ಅಥವಾ ಗಲ್ಲಿಯಲ್ಲಾಗಲಿ ನಡೆವಾಗ ನಾಯಿ ಬೊಗಳುವುದು ಸಹಜ. ನಮ್ಮ ಗುಣ ಆನೆಯಂತೆ ಇದ್ದಾಗ ಬೊಗಳುವ ನಾಯಿಗಳ ಸಮಕ್ಕೆ ನಾವು ಇಳಿಯಬಾರದು. ಆಕಸ್ಮಿಕ ಸಿಟ್ಟಿಗೆ ಇಳಿದರೆ ನಮ್ಮ ಆನೆಯ ಸ್ಥಾನ ನಾಯಿಗೆ ಸಮ ಆಗುತ್ತದೆ. ನಾನು ಕಲಿತ ನೀತಿಪಾಠ ಇಂದಿನ ಸಮಾಜದ ನಡೆಗೆ’ ಎಂದು ಉಲ್ಲೇಖಿಸಿದ್ದರು.
Laxmi News 24×7