Breaking News

ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ; 577 ನಾಮಪತ್ರ ಸಲ್ಲಿಕೆ

Spread the love

ಧಾರವಾಡ, ಆಗಸ್ಟ್ 24; ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಒಟ್ಟು 577 ನಾಮಪತ್ರಗಳು ಸಲ್ಲಿಕೆಯಾಗಿವೆ. 82 ವಾರ್ಡ್‌ಗಳಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದ್ದು, ಸೆಪ್ಟೆಂಬರ್ 6ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಸೋಮವಾರ ಕೊನೆಯ ದಿನವಾಗಿತ್ತು. ಸೋಮವಾರ 478 ನಾಮಪತ್ರಗಳು ಸಲ್ಲಿಕೆಯಾಗಿದ್ದು, 82 ವಾರ್ಡ್‌ಗಳಿಗೆ ಒಟ್ಟು 577 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಕಟಣೆಯಲ್ಲಿ ಹೇಳಿದ್ದಾರೆ.

 

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಸೆಪ್ಟೆಂಬರ್ 3ರಂದು ನಡೆಯಲಿದೆ. ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರಗಳನ್ನು ವಾಪಸ್ ಪಡೆಯಲು ಆಗಸ್ಟ್ 26ರ ಗುರುವಾರದ ತನಕ ಅವಕಾಶವಿದೆ. ಬಳಿಕ ಅಂತಿಮವಾಗಿ ಎಷ್ಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂಬುದು ತಿಳಿಯಲಿದೆ.

 

ಪಕ್ಷವಾರು ವಿವರಗಳು ಮಹಾನಗರ ಪಾಲಿಕೆ ಚುನಾವಣೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ 112, ಬಿಜೆಪಿ 121, ಜೆಡಿಎಸ್ 55, ಎಎಪಿ 46, ಉತ್ತಮ ಪ್ರಜಾಕೀಯ 13, ಕರ್ನಾಟಕ ರಾಷ್ಟ್ರ ಸಮಿತಿಯ ಅಭ್ಯರ್ಥಿಗಳು 6 ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

 

ಉಳಿದಂತೆ ಎ.ಐ.ಎಮ್.ಐ.ಎಮ್ 13, ಎಸ್.ಡಿ.ಪಿ.ಐ 4 , ಬಿಎಸ್‍ಪಿ 7, ಭಾರತ ಕಮ್ಯುನಿಷ್ಟ್ ಪಾರ್ಟಿ 1, ಕರ್ನಾಟಕ ಶಿವಸೇನಾ 5, ಕರ್ನಾಟಕ ಜನಸೇನಾ ಶಕ್ತಿ 1 ಮತ್ತು 189 ಪಕ್ಷೇತರರು ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ. ಅತ್ಯಂತ ಕಡಿಮೆ ಎಂದರೆ 2 ನಾಮಪತ್ರ ವಾರ್ಡ ಸಂಖ್ಯೆ 14ಕ್ಕೆ ಮತ್ತು ಅತಿ ಹೆಚ್ಚು ನಾಮಪತ್ರಗಳು ಅಂದರೆ 16 ವಾರ್ಡ್ ಸಂಖ್ಯೆ 24 ಮತ್ತು 28ಕ್ಕೆ ಸಲ್ಲಿಕೆಯಾಗಿವೆ.

ಕುತೂಹಲ ಮೂಡಿಸಿರುವ ಚುನಾವಣೆ; ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 67 ವಾರ್ಡ್‌ಗಳಿದ್ದವು. ಈಗ ವಾರ್ಡ್‌ಗಳ ಪುನರ್ ವಿಂಗಡನೆಯಾಗಿದ್ದು ವಾರ್ಡ್‌ಗಳ ಸಂಖ್ಯೆ 82ಕ್ಕೆ ಏರಿಕೆಯಾಗಿದೆ.

ವಾರ್ಡ್‌ ವಿಂಗಡನೆ ಸರಿಯಾಗಿ ನಡೆದಿಲ್ಲ ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿವಾದ ನ್ಯಾಯಾಲಯ ಮೆಟ್ಟಿಲೇರಿದ ಕಾರಣದಿಂದಾಗಿ ಸುಮಾರು 2 ವರ್ಷಗಳಿಂದ ಪಾಲಿಕೆ ಚುನಾವಣೆಯೇ ನಡೆದಿರಲಿಲ್ಲ.

ವಾರ್ಡ್‌ ಪುನರ್ ವಿಂಗಡನೆ ಪರಿಣಾಮ ಮೀಸಲಾತಿಯೂ ಬದಲಾಗಿದ್ದು ಕಳೆದ ಬಾರಿ ಆಯ್ಕೆಯಾಗಿದ್ದ ಸದಸ್ಯರಿಗೆ ಈ ಬಾರಿ ಟಿಕೆಟ್ ಕೈ ತಪ್ಪಿದೆ. ಆದ್ದರಿಂದ ಮೂರು ಪ್ರಮುಖ ಪಕ್ಷಗಳಲ್ಲಿ ಚಿಕ್ಕ-ಪುಟ್ಟ ಅಸಮಾಧಾನವಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 82 ವಾರ್ಡ್‌ಗಳಲ್ಲಿ ಒಟ್ಟು 8,11,537 ಮತದಾರರು ಇದ್ದಾರೆ. ನಾಮಪತ್ರ ವಾಪಸ್ ಪಡೆದ ಬಳಿಕ ಎಷ್ಟು ಅಭ್ಯರ್ಥಿಗಳು ಕಣದಲ್ಲಿ ಉಳಿಯಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ.

ಸೆಪ್ಟೆಂಬರ್ 3ರಂದು ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲ. ಬೆಳಗಾವಿಯ 58 ವಾರ್ಡ್, ಕಲಬುರಗಿ ಮಹಾನಗರ ಪಾಲಿಕೆಯ 55 ವಾರ್ಡ್‌ಗಳಿಗೆ ಸಹ ಚುನಾವಣೆ ನಡೆಯಲಿದೆ.

ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು 3 ಲಕ್ಷ ರೂ.ಗಳ ವೆಚ್ಚ ಮಾಡಬಹುದು ಎಂದು ಚುನಾವಣಾ ಆಯೋಗ ಮಿತಿ ನಿಗದಿಪಡಿಸಿದೆ. ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಮುದ್ರಣ ಸಾಮಗ್ರಿಗಳಿಗೆ, ಸುದ್ದಿ ಮಾಧ್ಯಮಗಳು, ಸ್ಥಳೀಯ ಕೇಬಲ್ ವಾಹಿನಿಗಳಲ್ಲಿ ಬಿತ್ತರವಾಗುವ ಜಾಹೀರಾತುಗಳು, ಅಂತರ್ಜಾಲ ಆಧಾರಿತ ಸಾಮಾಜಿಕ ಜಾಲತಾಣಗಳ ಮೂಲಕ ಕೈಗೊಳ್ಳುವ ಪ್ರಚಾರಕ್ಕೆ ಅವುಗಳ ವಿಡಿಯೋ ನಿರ್ಮಾಣ ಮತ್ತು ಫೋಟೋಗಳ ಸೃಜನಾತ್ಮಕ ವಿನ್ಯಾಸಕ್ಕೆ ನ್ಯಾಯಯುತ ದರ ವಿಧಿಸಲಾಗುತ್ತದೆ.

ಕೋವಿಡ್ ಪರಿಸ್ಥಿತಿ ರಾಜ್ಯ ಚುನಾವಣಾ ಆಯೋಗ ಕೋವಿಡ್ ಪರಿಸ್ಥಿತಿಯಲ್ಲಿ ಚುನಾವಣೆಯನ್ನು ಘೋಷಣೆ ಮಾಡಿದೆ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಹಾಗೂ ಬಹಿರಂಗ ಪ್ರಚಾರ ನಡೆಸಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.

ಅಭ್ಯರ್ಥಿಯೂ ಸೇರಿ ಗರಿಷ್ಠ 5 ಜನ ಬೆಂಬಲಿಗರೊಂದಿಗೆ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಬಹುದು. ಪ್ರಚಾರಕ್ಕೆ ವಾಹನ ಬಳಸುವುದನ್ನು ಮತ್ತು ಗುಂಪು ಗುಂಪು ಸೇರಿ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ.

ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಚಾರ ಕೈಗೊಳ್ಳಬಹುದು. ಆದರೆ ಅಭ್ಯರ್ಥಿಗಳು ಅವುಗಳ ವೆಚ್ಚದ ವಿವರವನ್ನು ಸಲ್ಲಿಸಬೇಕು. ಪ್ರಚಾರಕ್ಕಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರವನ್ನು ಹಂಚಬಹುದು. ಈ ಸಮಯದಲ್ಲಿಯೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.


Spread the love

About Laxminews 24x7

Check Also

ಪುರುಷರಿಗೆ ಸಾರಿಗೆ ಬಸ್ ಗಳಲ್ಲಿ ‘ಉಚಿತ ಪ್ರಯಾಣ’ ಪ್ರಸ್ತಾವನೆ ಸದ್ಯಕ್ಕೆ ಇಲ್ಲ : ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

Spread the love ಹುಬ್ಬಳ್ಳಿ : ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ನಿನ್ನೆ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಕ್ಕಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ