ಬೆಂಗಳೂರು: ರಾಜ್ಯದಲ್ಲಿ ಹೊಸ ಡಿಜಿಟಲೀಕರಣ ನೀತಿಯ ಜತೆಗೆ ಸಂಶೋಧನೆ ಮತ್ತು ಅಭಿವೃದ್ಧಿ ಪಾಲಿಸಿಯನ್ನು ಜಾರಿಗೆ ತರಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, 2021-22ನೇ ಸಾಲಿನ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸ ಡಿಜಿಟಲೈಸೇಷನ್ ಪಾಲಿಸಿ (ಹೊಸ ಡಿಜಿಟಲೀಕರಣ ನೀತಿ)ಯನ್ನು ಜಾರಿಗೆ ತರಲಿದ್ದೇವೆ. ಬ್ರಾಡ್ಬ್ಯಾಂಡ್ ಹಾಗೂ ಇಂಟರ್ ನೆಟ್ ವ್ಯವಸ್ಥೆಯನ್ನು ಗ್ರಾಹಕರ ಪ್ರಿಯವಾಗಿ ಮಾಡಲಿದ್ದೇವೆ. ಇದಕ್ಕೆ ತಜ್ಞರ ಸಲಹೆಯನ್ನು ಪಡೆಯಲಿದ್ದೇವೆ. ತಜ್ಞರು ಎಷ್ಟು ಬೇಗ ಸಲಹೆ ನೀಡುತ್ತಾರೋ ಅಷ್ಟು ಬೇಗ ಡಿಜಿಟಲ್ ನೀತಿ ಅನುಷ್ಠಾನ ಮಾಡಲಿದ್ದೇವೆ ಎಂದರು.
ಹಾಗೆಯೇ ರಾಷ್ಟ್ರೀಯ ಶಿಕ್ಷಣ ನೀತಿಗೆ ಒತ್ತು ನೀಡಲು ಕರ್ನಾಟಕದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ(ಆರ್ ಆಯಂಡ್ ಡಿ) ನೀತಿಯನ್ನು ಜಾರಿಗೆ ಮಾಡಲಿದ್ದೇವೆ. ಇದಕ್ಕೆ ಬೇಕಾದ ವಿಶೇಷ ಆದ್ಯತೆ ಮುಂದಿನ ಬಜೆಟ್ ನಲ್ಲಿ ನೀಡಲಿದ್ದೇವೆ ಎಂದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕೌನ್ಸಿಲ್ ಅನ್ನು ಕಲಬುರಗಿಯಲ್ಲಿ ರಚಿಸಲು ನಿರ್ಧರಿಸಿದ್ದೇವೆ. ಜತೆಗೆ 8ನೇ ತರಗತಿಯಿಂದಲೇ ವ್ಯಕ್ತಿತ್ವ ವಿಕಸನ ಕಲಿಸಬೇಕು. ಗ್ರಾಮೀಣ ಭಾಗದಲ್ಲಿ ಎಲ್ಲ ಶೈಕ್ಷಣಿಕ ವ್ಯವಸ್ಥೆ ಸಿಗುವಂತೆ ಆಗಬೇಕು. ಪ್ರಸಕ್ತ ಸಾಲಿನಲ್ಲಿ ಪದವಿ ಸೇರುವ ವಿದ್ಯಾರ್ಥಿಗಳಿಗೆ ಐ ಪ್ಯಾಡ್ ಕೂಡ ನೀಡಲಿದ್ದೇವೆ. ಸಂಶೋಧನೆ ಹಾಗೂ ಅಭಿವೃದ್ಧಿಗೂ ಆದ್ಯತೆ ನೀಡಲಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.