ಬೆಂಗಳೂರು: ‘ನೀವು ಯುವತಿ ಜತೆ ನಗ್ನವಾಗಿರುವ ವಿಡಿಯೋ ನನ್ನ ಬಳಿ ಇದೆ’ ಎಂದು ಬಿಜೆಪಿ ಮುಖಂಡನಿಗೆ ಅಪರಿಚಿತನೊಬ್ಬ ಬ್ಲ್ಯಾಕ್ಮೇಲ್ ಮಾಡಿದ್ದು, ಸುಮಾರು 30 ಸಾವಿರ ರೂಪಾಯಿ ವಸೂಲಿ ಕೂಡ ಮಾಡಿಕೊಂಡಿದ್ದಾನೆ. ಅಪರಿಚಿತ ವ್ಯಕ್ತಿಯ ಬೆದರಿಕೆ ಕರೆ ಕುರಿತು ಬಿಜೆಪಿ ಮುಖಂಡ ಪೊಲೀಸರಿಗೆ ದೂರು ನೀಡಿದ್ದಾರೆ.
ಬಿಜೆಪಿ ಮುಖಂಡ ಚಿ.ನಾ. ರಾಮು ಇಂಥದ್ದೊಂದು ಬೆದರಿಕೆ ಕರೆಗೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರದ ಸಾಮಾಜಿಕ ಸಬಲೀಕರಣ ಇಲಾಖೆ ಅಧೀನದ ಅಂಬೇಡ್ಕರ್ ಫೌಂಡೇಷನ್ ನಿರ್ದೇಶಕ ಆಗಿರುವ ಚಿ.ನಾ.ರಾಮು ಈ ಕುರಿತು ಬೆಂಗಳೂರು ಸೆಂಟ್ರಲ್ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಫೇಸ್ಬುಕ್ ಮೆಸೆಂಜರ್ ಮೂಲಕ ಚಿ.ನಾ.ರಾಮುಗೆ ಮಹಿಳೆಯೊಬ್ಬಳು ಪರಿಚಯಿಸಿಕೊಂಡಿದ್ದು, ನಂತರ ಅವರ ಮೊಬೈಲ್ಫೋನ್ ನಂಬರ್ ಕೇಳಿ ಪಡೆದಿದ್ದಳು. ಆಮೇಲೆ ವಾಟ್ಸ್ಆಯಪ್ನಲ್ಲಿ ವಿಡಿಯೋ ಕಾಲ್ ಮಾಡಿದ್ದ ಆಕೆ ಅಸಭ್ಯವಾಗಿ ವರ್ತಿಸಿದ್ದಳು. ಇದಾದ ಬಳಿಕ ಅಪರಿಚಿತ ವ್ಯಕ್ತಿ ಕರೆ ಮಾಡಿ, ‘ನೀವು ಯುವತಿ ಜತೆ ನಗ್ನವಾಗಿರುವ ವಿಡಿಯೋ ನನ್ನ ಬಳಿ ಇದೆ. ಕೇಳಿದಷ್ಟು ಹಣ ನೀಡದಿದ್ದಲ್ಲಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದ. ಆ ಬಳಿಕ ಅಪರಿಚಿತ ಸೂಚಿಸಿದ್ದ ಖಾತೆಗೆ 31,500 ರೂ. ಟ್ರಾನ್ಸ್ಫರ್ ಮಾಡಿದ್ದ ಚಿ.ನಾ.ರಾಮು, ಬ್ಲ್ಯಾಕ್ಮೇಲ್ ಮಾಡುತ್ತಿರುವವರನ್ನು ಪತ್ತೆ ಮಾಡಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.