ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ (Vinay Kulkarni) ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಇದೀಗ ಜಾಮೀನು ಮೇಲೆ ಬಿಡುಗಡೆ ಆಗಿದ್ದಾರೆ. ಆದರೆ ಅವರು ಧಾರವಾಡ ಜಿಲ್ಲೆಗೆ ಹೋಗುವಂತಿಲ್ಲ ಅಂತಾ ಕೋರ್ಟ್ ಸೂಚನೆ ನೀಡಿದೆ. ಅಲ್ಲದೇ ಅವರು ಬೆಂಗಳೂರಿನಲ್ಲಿಯೇ ಇರಬೇಕು ಅನ್ನುವುದು ಕೂಡ ನ್ಯಾಯಾಲಯದ ಆದೇಶದಲ್ಲಿ ಸ್ಪಷ್ಟವಾಗಿದೆ. ಹಾಗಾದರೆ ಜೈಲಿನಿಂದ ಬಿಡುಗಡೆಯಾದ ವಿನಯ್ ಕುಲಕರ್ಣಿ ಎಲ್ಲಿಗೆ ಹೋದರು ಎನ್ನುವುದು ಇದೀಗ ಕುತೂಹಲ ಮೂಡಿಸಿದೆ.
ಹತ್ಯೆ ಪ್ರಕರಣದಲ್ಲಿ ಸುಮಾರು ಒಂಭತ್ತು ತಿಂಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಶನಿವಾರ ಬೆಳಿಗ್ಗೆ 11.25 ಕ್ಕೆ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದ ವಿನಯ್ ಅವರಿಗೆ ಅದ್ಧೂರಿ ಸ್ವಾಗತವನ್ನು ಅವರ ಬೆಂಬಲಿಗರು ಕೋರಿದರು. ಮೆರವಣಿಗೆ ಮೂಲಕ ಹಿಂಡಲಗಾ ಗಣೇಶ ದೇವಸ್ಥಾನದವರೆಗೂ ಜನರು ಕರೆದೊಯ್ದರು. ಅದಾದ ಬಳಿಕ ವಿನಯ್ ನಾಗನೂರು ಶ್ರೀ ರುದ್ರಾಕ್ಷಿ ಮಠಕ್ಕೂ ಭೇಟಿ ನೀಡಿ, ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದರು. ನಂತರ ಹಲಗಾ ಜೈನ ಸ್ವಾಮೀಜಿಗಳನ್ನು ಕೂಡ ಭೇಟಿಯಾಗಿ, ಆಶೀರ್ವಾದ ಪಡೆದರು. ಈ ವೇಳೆ ಸಾವಿರಾರು ಬೆಂಬಲಿಗರು ವಿನಯ್ ಕುಲಕರ್ಣಿ ಅವರ ಜೊತೆಗೆ ಇದ್ದರು. ಆದರೆ ನ್ಯಾಯಾಲಯದ ಆದೇಶದನ್ವಯ ವಿನಯ್ ಬೆಂಗಳೂರಿನಲ್ಲಿ ಮಾತ್ರ ಇರಬೇಕು. ಜನಪ್ರತಿನಿಧಿ ಕೋರ್ಟ್ನ ವ್ಯಾಪ್ತಿಯನ್ನು ದಾಟಿ ಹೋಗಬೇಕಾದರೆ ಅನುಮತಿ ಕಡ್ಡಾಯ ಅಂತಾ ಹೇಳಿದೆ. ಅಲ್ಲದೇ ಧಾರವಾಡ ಜಿಲ್ಲೆಗೆ ಯಾವುದೇ ಕಾರಣಕ್ಕೂ ಪ್ರವೇಶ ಮಾಡುವಂತಿಲ್ಲ ಅಂತಾ ಹೇಳಿದೆ. ಈ ಹಿನ್ನೆಲೆಯಲ್ಲಿ ವಿನಯ್ ರಾಷ್ಟ್ರೀಯ ಹೆದ್ದಾರಿ 4 ರ ಮೂಲಕ ಬೆಂಗಳೂರಿಗೆ ಹೋಗುವಂತಿಲ್ಲ. ಕಾರಣ ಹಾಗೆ ಹೋಗಬೇಕೆಂದರೆ ಅದು ಧಾರವಾಡದ ಮೂಲಕವೇ ಹೋಗಬೇಕು. ಅದು ಷರತ್ತಿನ ಉಲ್ಲಂಘನೆಯಾಗುತ್ತೆ. ಈ ಹಿನ್ನೆಲೆಯಲ್ಲಿ ಜೈನ ಮಠದ ಸ್ವಾಮೀಜಿಯನ್ನು ಭೇಟಿಯಾದ ಬಳಿಕ ವಿನಯ್ ಯಾವ ಕಡೆಗೆ ಹೋಗುತ್ತಾರೆ ಅನ್ನೋ ಕುತೂಹಲ ಇತ್ತು. ಅಲ್ಲದೇ ಸಂಜೆ 7 ಗಂಟೆಗೆ ಬೆಳಗಾವಿಯಿಂದ ಬೆಂಗಳೂರಿಗೆ ವಿಮಾನ ಮೂಲಕ ಹೋಗುತ್ತಾರೆ ಎನ್ನಲಾಗಿತ್ತು.
ಎಲ್ಲರ ಕಣ್ಣು ತಪ್ಪಿಸಿ 4 ಗಂಟೆ ಹೊತ್ತಿಗೆ ವಿನಯ್ ಏರ್ಪೋರ್ಟ್ ರಸ್ತೆಯಿಂದ ಬೇರೆ ಕಡೆಗೆ ಪ್ರಯಾಣ ಬೆಳೆಸಿದರು. ಕೊನೆಗೆ ಗೊತ್ತಾಗಿದ್ದು ಅವರು ಬಾಗಲಕೋಟೆ ಮೂಲಕ ಹೊಸಪೇಟೆ, ಚಿತ್ರದುರ್ಗ ಮೂಲಕ ಬೆಂಗಳೂರಿಗೆ ಹೋಗಿದ್ದಾರೆ ಅನ್ನೋದು. ಆದರೆ ಸಂಜೆ 4 ಗಂಟೆಗೆ ಬೆಳಗಾವಿ ಬಿಟ್ಟಿದ್ದರೂ ತಡರಾತ್ರಿಯವರೆಗೂ ಅವರು ಬೆಂಗಳೂರಿನ ತಮ್ಮ ಮನೆಯನ್ನು ಮುಟ್ಟಲೇ ಇಲ್ಲ.
ಈ ಮಧ್ಯೆ ಧಾರವಾಡ ಕಾಂಗ್ರೆಸ್ನಲ್ಲಿ ವಿನಯ್ ಕುಲಕರ್ಣಿ ಅವರ ಬಿಡುಗಡೆಗಾಗಿ ಉಳಿದ ನಾಯಕರು ಹಾಗೂ ಕಾರ್ಯಕರ್ತರು ಕಾಯುತ್ತಿದ್ದರು. ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಹೀಗಾಗಿ ಅಭ್ಯರ್ಥಿಗಳ ಅಂತಿಮ ಪಟ್ಟಿ ತಯಾರಿಸಲು ವಿನಯ್ ಕುಲಕರ್ಣಿ ಅನಿವಾರ್ಯ. ಹೀಗಾಗಿ ಅಜಾತ ಸ್ಥಳದಲ್ಲಿ ಕೈ ನಾಯಕರು ವಿನಯ್ ಜೊತೆಗೆ ಸಭೆ ನಡೆಸಿ, ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ನಿರ್ಧಾರಗೊಳಿಸಿದ್ದಾರೆ ಎನ್ನಲಾಗಿದೆ. ಸದ್ಯ ಬಿಡುಗಡೆಯಾದ ಬಳಿಕ ವಿನಯ್ ಮುಂದೆ ಎಲ್ಲಿಗೆ ಹೋದರು ಎನ್ನುವ ಬಗ್ಗೆ ಕುತೂಹಲ ಮೂಡಿದೆ.