ಬೆಂಗಳೂರು,- ಸೆ.3ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಸ್‍ನಲ್ಲಿ ಉಚಿತವಾಗಿ ಪ್ರಯಾಣಿಸಲು ಕೆಎಸ್‍ಆರ್‍ಟಿಸಿ ಅವಕಾಶ ಮಾಡಿಕೊಟ್ಟಿದೆ.
ವಿದ್ಯಾರ್ಥಿಗಳು ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಮತ್ತು ಪರೀಕ್ಷಾ ಕೇಂದ್ರದಿಂದ ಮನೆಗೆ ಹಿಂದಿರುಗುವಾಗ ದ್ವಿತೀಯ ಪಿಯುಸಿ ಪ್ರವೇಶಪತ್ರವನ್ನು ತೋರಿಸಿ ಕೆಎಸ್‍ಆರ್‍ಟಿಸಿ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗಧೂತ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂಬಂಧ ಕೆಎಸ್‍ಆರ್‍ಟಿಸಿಯ ಎಲ್ಲ ಚಾಲಕ, ನಿರ್ವಾಹಕರಿಗೆ ಸೂಕ್ತ ತಿಳುವಳಿಕೆ ನೀಡಲು ಎಲ್ಲ ಹಿರಿಯ ವಿಭಾಗೀಯ ನಿಯಂತ್ರಣಾಕಾರಿಗಳಿಗೆ ಸೂಚನೆ ನೀಡಲಾಗಿದೆ.ಜೊತೆಗೆ ವಿದ್ಯಾರ್ಥಿಗಳು ಬಸ್ ಹತ್ತಲು ಮತ್ತು ಇಳಿಯಲು ಅನುಕೂಲವಾಗುವಂತೆ ಕೋರಿಕೆ ನಿಲುಗಡೆ ಕೈಗೊಳ್ಳಲು ಕೆಎಸ್‍ಆರ್‍ಟಿಸಿ ಮುಖ್ಯ ಸಂಚಾರಿ ವ್ಯವಸ್ಥಾಪಕರು ನಿರ್ದೇಶನ ನೀಡಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಕೆಎಸ್‍ಆರ್‍ಟಿಸಿಗೆ ಪತ್ರ ಬರೆದು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಾಳೆಯಿಂದ ಪ್ರಾರಂಭವಾಗುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಸ್‍ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವಂತೆ ಕೋರಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
Laxmi News 24×7