ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸುವ ಗುರಿಯೊಂದಿಗೆ ದೇಶದಲ್ಲೇ ಮೊದಲ ಬಾರಿಗೆ ‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ’ ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.
ಈ ಕಾರ್ಯಕ್ರಮಕ್ಕೆ ಸೋಮವಾರ ಕಂದಾಯ ಸಚಿವ ಆರ್. ಅಶೋಕ್ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೊರೋನಾ ನಿಯಂತ್ರಣ ಸಂಬಂಧ ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಗರದ 29 ಲಕ್ಷ ಮನೆಗಳಿಗೂ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುವ ಗುರಿಯನ್ನು ಈ ಯೋಜನೆಯಲ್ಲಿ ಹೊಂದಲಾಗಿದೆ. ಮೊದಲ ಹಂತದಲ್ಲಿ ನಗರದ 27 ವಿಧಾನಸಭಾ ಕ್ಷೇತ್ರಗಳ ಆಯ್ದ 54 ವಾರ್ಡ್ ಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಿದೆ ಎಂದು ಮಾಹಿತಿ ನೀಡಿದರು.
ವೈದ್ಯರ ತಂಡವು ಪ್ರತಿ ಮನೆಗೂ ಭೇಟಿ ನೀಡಿ ಸದಸ್ಯರ ಆರೋಗ್ಯ ವಿಚಾರಿಸಲಿದೆ. ಮನೆಯಲ್ಲಿ ಎಷ್ಟು ಮಂದಿ ವಾಸವಿದ್ದಾರೆ. ಎಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಮೊದಲ ಲಸಿಕೆ ಹಾಗೂ ಎರಡನೇ ಡೋಸ್ ಲಸಿಕೆ ಪಡೆದಿರುವ ಬಗ್ಗೆ, ಕ್ಯಾನ್ಸರ್, ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಇನ್ನಿತರೆ ರೋಗಗಳಿರುವ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇದರಿಂದ ಕೊರೋನಾ ಲಸಿಕೆ ಪಡೆದವರ ನಿಖರ ಮಾಹಿತಿ ಕೂಡ ಲಭ್ಯವಾಗಲಿದೆ. ಕೊರೋನಾ ಸೋಂಕು ಇರುವವರನ್ನು ಪತ್ತೆ ಹಚ್ಚಿ ಸಕಾಲಕ್ಕೆ ಚಿಕಿತ್ಸೆ ನೀಡಲು ಇದು ಸಹಾಯವಾಗಲಿದೆ ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಐವರು ಸದಸ್ಯರ ತಂಡ ರಚಿಸಲಾಗಿದೆ. ಅದರಲ್ಲಿ ಒಬ್ಬ ವೈದ್ಯಾಧಿಕಾರಿ (ಎಂಬಿಬಿಎಸ್/ಬಿಡಿಎಸ್/ಆಯುಷ್) ಹಾಗೂ ಉಳಿದಂತೆ ನರ್ಸ್, ಆಶಾಕಾರ್ಯಕರ್ತೆಯರು ಸೇರಿದಂತೆ ಅರೆ ವೈದ್ಯಕೀಯ ಸಿಬ್ಬಂದಿಗಳಿರುತ್ತಾರೆ. ಪ್ರತಿ ತಂಡದ ವೈದ್ಯಾಧಿಕಾರಿಗಳು ‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ. ನಿಮ್ಮ ಆರೋಗ್ಯವೇ ನಮ್ಮ ಭಾಗ್ಯ’ ಎಂಬ ಘೋಷಣೆಯನ್ನೊಳಗೊಂಡ ಬಿಳಿ ಬಣ್ಣದ ಏಪ್ರಾನ್ ಧರಿಸಿರುತ್ತಾರೆ.
ಜೊತೆಗೆ ಪ್ರತಿಯೊಂದು ತಂಡವು ಪ್ರತಿದಿನ ಕನಿಷ್ಠ 50 ಮನೆಗಳ ಸಮೀಕ್ಷೆ ನಡೆಸುತ್ತದೆ. ಪ್ರತೀ ವಾರ್ಡ್‍ಗೆ 5 ವೈದ್ಯರ ತಂಡಗಳನ್ನು ರಚಿಸಲಾಗಿದ್ದು, ಅಗತ್ಯಕ್ಕ ತಕ್ಕಂತೆ ಹೆಚ್ಚಿನ ತಂಡಗಳನ್ನು ನಿಯೋಜಿಸಿಕೊಳ್ಳಲಾಗುವುದು. ಮನೆ-ಮನೆಗೆ ತಂಡಗಳು ಭೇಟಿ ನಿಡುವ ಸಲುವಾಗಿ ವಾಹನಗಳ ನಿಯೋಜನೆ ಮಾಡಲಾಗಿದೆ. ಪ್ರಮುಖವಾಗಿ ಸಮೀಕ್ಷಾ ಕಾರ್ಯದಲ್ಲಿ ಪಡೆದ ಮಾಹಿತಿಯನ್ನು ಪ್ರತೀ ದಿನ ಬಿಬಿಎಂಪಿ ನಿಗದಿತ ಸಾಫ್ಟವೇರ್‌ನಲ್ಲಿ ದಾಖಲಿಸಲು ವೈದ್ಯರ ತಂಡಕ್ಕೆ ಸೂಚಿಸಲಾಗಿದೆ.
ಹಬ್ಬಗಳು ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಕೋವಿಡ್ ಹರಡುವ ಭೀತಿಯೂ ಇದೆ. ಹಾಗಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ, ಕೆಲ ದಿನದ ಮಟ್ಟಿಗೆ ಬೆಂಗಳೂರಿಗೆ ಮಾತ್ರ ಸಿಮೀತಗೊಳಿಸಿ ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳುವ ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.