ಚಾಮರಾಜನಗರ: 2021ರ ಮೇ 2ರಂದು ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್ ದುರಂತಕ್ಕೆ 36 ಮಂದಿ ಬಲಿಯಾಗಿದ್ದರು. ಇಂದಿಗೆ ಆಕ್ಸಿಜನ್ ದುರಂತಕ್ಕೆ ನೂರು ದಿನ ಆಗಿದ್ದು, ಮೃತರ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಈ ಪೈಕಿ ದೊಡ್ಡಯ್ಯ ಕುಟುಂಬವೂ ಒಂದು.
ಚಾಮರಾಜನಗರ ತಾಲೂಕು ಮಂಗಲ ಹೊಸೂರು ಗ್ರಾಮದ ದೊಡ್ಡಯ್ಯ ಮೃತಪಟ್ಟ ಬಳಿಕ ಕುಟುಂಬ ಭಾರೀ ಅಂಕಷ್ಟಕ್ಕೆ ಸಿಲುಕಿದೆ. ಜೀವನೋಪಾಯಕ್ಕೆ ಬೇರೆ ದಾರಿ ಇಲ್ಲದೆ ದೊಡ್ಡಯ್ಯರ ಮಗ ಶಶಾಂಕ್ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಯಾದ ಈತ ಶೇ.94 ಅಂಕದೊಂದಿಗೆ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಕ್ರಷರ್ ಘಟಕದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ದೊಡ್ಡಯ್ಯ, ಮಗನನ್ನು ಮೆಡಿಕಲ್ ಇಲ್ಲವೇ ಏರೋನಾಟಿಕಲ್ ಇಂಜಿನಿಯರ್ ಮಾಡುವ ಕನಸು ಕಂಡಿದ್ದರು. ಆದರೆ, ಆಕ್ಸಿಜನ್ ದುರಂತದಲ್ಲಿ ಕೊನೆಯುಸಿರೆಳೆದರು. ಇತ್ತ ಸಿಇಟಿ, ನೀಟ್ ಪರೀಕ್ಷೆಯನ್ನೂ ತೆಗೆದುಕೊಳ್ಳಲಾದೆ ಶಶಾಂಕ್, ಓದನ್ನು ನಿಲ್ಲಿಸಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾನೆ.
ಆಕ್ಸಿಜನ್ ದುರಂತ ಪ್ರಕರಣ ಸಂಬಂಧ ಮೃತರ ಕುಟುಂಬಕ್ಕೆ ನ್ಯಾಯಾಲಯದ ಆದೇಶದಂತೆ ಸರ್ಕಾರ 2 ಲಕ್ಷ ರೂ. ಪರಿಹಾರ ನೀಡಿತ್ತಾದರೂ, ಆ ಹಣದಲ್ಲಿ ಸಾಲ ತೀರಿಸಿ ಕುಟುಂಬವೀಗ ಬರಿಗೈಲಿದೆ. ಅನ್ಯದಾರಿ ಕಾಣದೆ ಸದ್ಯಕ್ಕೆ ಅಜ್ಜಿ ಮನೆಯಲ್ಲಿ ದೊಡ್ಡಯ್ಯ ಕುಟುಂಬ ಆಶ್ರಯ ಪಡೆದಿದೆ. ದೊಡ್ಡಯ್ಯರ ಮಗಳು ಸ್ನೇಹಲತಾ ಕೂಡ ಪ್ರತಿಭಾನ್ವಿತ ವಿದ್ಯಾರ್ಥಿನಿ. ನೋವಿನಲ್ಲೂ ಪರೀಕ್ಷೆ ಬರೆದು ಇದೀಗ ಎಸ್ಸೆಸ್ಸೆಲ್ಸಿಯಲ್ಲಿ ಶೇ.89 ಅಂಕ ಪಡೆದಿದ್ದಾಳೆ. ಈ ಬಡ ಕುಟುಂಬಕ್ಕೆ ಉಳ್ಳವರು ಸಹಾಯಹಸ್ತ ಚಾಚಿದರೆ ಪ್ರತಿಭಾವಂತ ಮಕ್ಕಳು ಓದು ಮುಂದುವರಿಸಲು ಅನುಕೂಲ ಆಗಲಿದೆ.