ಬೆಂಗಳೂರು,ಆ.11-ಬಿಹಾರ ರಾಜ್ಯದಿಂದ ಅಕ್ರಮವಾಗಿ ನಾಡಪಿಸ್ತೂಲುಗಳನ್ನು ಖರೀದಿ ಮಾಡಿಕೊಂಡು ಬಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಅಶೋಕನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿ ಎರಡು ನಾಡಪಿಸ್ತೂಲು, 5 ಜೀವಂತ ಗುಂಡುಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಸೋನುಕುಮಾರ್(32), ಸುನೀಲ್‍ಕುಮಾರ್(32), ಇರ್ಫಾನ್(26) ಮತ್ತು ಆಂಧ್ರ ಪ್ರದೇಶದ ಮುರುಳಿ ವಿನೋದ್(47) ಬಂಧಿತ ಆರೋಪಿಗಳು.
ಆಗಸ್ಟ್ 7ರಂದು ಹೊಸೂರು ರಸ್ತೆಯ ಸಿಮೆಂಟ್ರಿ ರಸ್ತೆಯಲ್ಲಿರುವ ಹಿಂದೂ ಸಿಮೆಂಟ್ರಿ ಬಳಿ ಮೂವರು ಯಾವುದೇ ಪರವಾನಗಿ ಇಲ್ಲದೆ ನಾಡಪಿಸ್ತೂಲಗಳನ್ನಿಟ್ಟುಕೊಂಡು ದ್ವಿಚಕ್ರ ವಾಹನದಲ್ಲಿ ಮಾರಾಟ ಮಾಡಲು ಬರುತ್ತಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಅಕ್ರಮವಾಗಿ ನಾಡಪಿಸ್ತೂಲುಗಳನ್ನು ಸಮಾಜಘಾತುಕ ಮತ್ತು ರೌಡಿ ಚಟುವಟಿಕೆ ಹಿನ್ನೆಲೆಯುಳ್ಳವರಿಗೆ ಮಾರಾಟ ಮಾಡಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ವರನ್ನು ಬಂಧಿಸಿ 2 ನಾಡಪಿಸ್ತೂಲು, 5 ಜೀವಂತ ಗುಂಡುಗಳು, ಒಂದು ಮ್ಯಾಗ್‍ಜಿನ್, 2 ದ್ವಿಚಕ್ರ ವಾಹನ ಮತ್ತು 5 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಗಳ ಪೈಕಿ ಸೋನುಕುಮಾರ್, ಸುನೀಲ್‍ಕುಮಾರ್, ಇರ್ಫಾನ್, ಬಿಹಾರ ರಾಜ್ಯದ ಸುಲ್ತಾನ್ ಗಂಜ್‍ನ ಲೂತನ್‍ಸಿಂಗ್ ಎಂಬಾತನಿಂದ ಅಕ್ರಮವಾಗಿ ನಾಡಪಿಸ್ತೂಲುಗಳನ್ನು ಖರೀದಿ ಮಾಡಿಕೊಂಡು ಬಂದು ಅವುಗಳನ್ನು ಮಾರಾಟ ಮಾಡುವಂತಹ ಜಾಲದಲ್ಲಿ ತೊಡಗಿಸಿಕೊಂಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಮತ್ತೊಬ್ಬ ಆರೋಪಿ ಮುರುಳಿ ವಿನೋದ್, ಅಕ್ರಮವಾಗಿ ನಾಡಪಿಸ್ತೂಲು ಮತ್ತು 5 ಜೀವಂತ ಗುಂಡುಗಳನ್ನು ಖರೀದಿ ಮಾಡಿ ಇಟ್ಟುಕೊಂಡಿರುವುದು ಗೊತ್ತಾಗಿದೆ.
Laxmi News 24×7