ಬೆಂಗಳೂರು: ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರೆ ತಪ್ಪೇನು? ಅವರು ಖುಷಿಯಿಂದ ಬಂದರೆ ನಾವೇನು ತಳ್ಳುವುದಕ್ಕೆ ಆಗುತ್ತಾ ಎಂದು ಸಚಿವ ಬಿ.ಸಿ ಪಾಟೀಲ್ ಸಂಭ್ರಮಾಚರಣೆಯನ್ನು ಸಮರ್ಥಿಸಿಕೊಂಡರು.
ಸಚಿವರು ಸಂಭ್ರಮದಲ್ಲಿ ತೊಡಗಿದ್ದಾರೆಂಬ ಹೆಚ್‌ಡಿಕೆ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ಹೆಚ್ಚಳ ಆತಂಕದ ಕಾರಣ ಸರ್ಕಾರ ವೀಕೆಂಡ್, ನೈಟ್ ಕರ್ಪೂ ಮಾಡಿದೆ. ಗುಂಪು ಸೇರಬೇಡಿ, ಮಾಸ್ಕ್ ಧರಿಸಿ ಎಂದು ಹೇಳುತ್ತಿದ್ದೇವೆ. ಆದರೂ ಜನ ಗುಂಪು ಸೇರುತ್ತಾರೆ. ನಾವೇನು ಮಾಡಲು ಸಾಧ್ಯ ಎಂದರು.
ಬಿಜೆಪಿಯಲ್ಲಿ 105 ಮಂದಿ ಇದ್ದಿದಕ್ಕೆ ನಾವು ಮಂತ್ರಿಗಳಾಗಿರೋದು ಎಂಬ ಮುನಿರತ್ನ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎರಡೂ ಕೈಜೋಡಿಸಿರುವ ಕಾರಣದಿಂದಲೇ ಸರ್ಕಾರ ಬಂದಿರುವುದು. 105 ಮಂದಿ ಬಹಳ ಮುಖ್ಯ ಅದೇ ರೀತಿ 17 ಮಂದಿಯೂ ಕೂಡ ಅಷ್ಟೇ ಮುಖ್ಯ. ಎರಡೂ ಕಡೆಯವರು ಸೇರಿರುವುದಕ್ಕೆ ಸರ್ಕಾರ ರಚನೆ ಸಾಧ್ಯವಾಗಿರುವುದು ಎಂದು ಹೇಳಿದರು.
ಸೂಕ್ತ ಖಾತೆ ಸಿಗದ ಕಾರಣ ವಲಸಿಗ ಸಚಿವರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿ.ಸಿ ಪಾಟೀಲ್, ಕೊಟ್ಟಿರುವ ಖಾತೆಯನ್ನು ನಿಭಾಯಿಸಬೇಕು. ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವುದು ಸರಿಯಲ್ಲ. ಕೆಲವರು ತಮಗೆ ಇಂತಹದ್ದೇ ಖಾತೆ ಬೇಕೆಂದು ಬಯಸಿರುತ್ತಾರೆ. ಸಿಗದೇ ಇದ್ದಾಗ ಅಸಮಾಧಾನ ಸಹಜ. ಆದರೆ ಕೊಟ್ಟ ಖಾತೆಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ಅವರು ಇಂದು ಪೂಜೆ ನಡೆಸಿದರು. ಪತ್ನಿ ವನಜಾ ಪಾಟೀಲ್ ಜೊತೆ ಪೂಜೆ ಸಲ್ಲಿಸಿದರು. ಈ ವೇಳೆ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.