ಅಥಣಿ: ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಖಾಸಗಿಕರಣ ಎಪಿಎಂಸಿ ಕಾನೂನು ತಿದ್ದುಪಡಿ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಮಿನಿ ವಿಧಾನಸೌಧದ ಎದುರು ಸೇರಿದ ರೈತರು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಮಹದೇವಪ್ಪ ಮಡಿವಾಳ ಮಾತನಾಡಿ, ಭೂಸುಧಾರಣೆ ಕಾಯ್ದೆ ರೈತ ವಿರೋಧಿ ಹಾಗೂ ಮಾರಕ ಕಾಯ್ದೆಯಾಗಿದೆ ಇದು ವಿದೇಶಿ ಕಂಪನಿಗಳು ಮತ್ತು ಕಾರ್ಪೋರೇಟರ್ ಕಂಪನಿಗಳ ಪ್ರವೇಶಕ್ಕಾಗಿ ಈ ತಿದ್ದುಪಡಿ ಜಾರಿಗೆ ತರಲಾಗಿದೆ. ಇದರಿಂದ ಕೃಷಿಯಿಂದ ರೈತರನ್ನು ಹೊರದೂಡುವ ಕಾರ್ಯತಂತ್ರ ಕಾಯ್ದೆ ತಿದ್ದುಪಡಿಯ ಮುಖ್ಯ ಅಂಶವಾಗಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಈಗಾಗಲೇ ಸುಗ್ರೀವಾಜ್ಞೆ ಯೊಂದಿಗೆ ಹೊರ ಬಂದಿದ್ದು, ಈ ಸುಗ್ರೀವಾಜ್ಞೆಗೆ ರೈತನಿಂದ ರೈತನ ಮಾರುಕಟ್ಟೆಯನ್ನು ಕೈ ತಪ್ಪಿ ಸುವಂತಹ ಒಂದೇ ಉದ್ದೇಶ ಇದಾಗಿದೆ. ಈ ಕಾರಣಕ್ಕಾಗಿ ಎಪಿಎಂಸಿ ಕಾಯ್ದೆ ಕಲಂ 8 ರ ತಿದ್ದುಪಡಿಯು ಬರುವ ಎಂಎನ್ ಸಿಗಳು ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ಯಾವುದೇ ಭೇದವಿಲ್ಲದೆ ಅವಕಾಶಗಳನ್ನು ಕಲ್ಪಿಸಿ ರೈತರ ಕೃಷಿ ಮಾರುಕಟ್ಟೆಗೆ ಪರ್ಯಾಯವಾಗಿ ಕಂಪನಿಗಳು ಮಾರುಕಟ್ಟೆಯನ್ನು ತೆರೆಯ ಬಹುದಾದಂತಹ ಅವಕಾಶವನ್ನು ನೀಡಲಾಗಿದೆ. ಹೀಗಾಗಿ ರೈತ ಮಾರುಕಟ್ಟೆಯನ್ನು ಕಳೆದುಕೊಂಡು ನಾಳೆ ಕಂಪನಿಯ ಮುಂದೆ ತಲೆ ಬಗ್ಗಿಸಿ ನಿಲ್ಲುವಂತ ನೀತಿಯನ್ನು ತರಲಾಗಿದೆ.
ವಿದ್ಯುತ್‌ಶಕ್ತಿ ಕಾಯ್ದೆ 2003 ರಲ್ಲಿ ವಿದ್ಯುತ್ ಕ್ಷೇತ್ರವನ್ನು ಖಾಸಗಿ ಒಡೆತನಕ್ಕೆ ವಹಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಇಂದು ನರೇಂದ್ರ ಮೋದಿ ಕೇಂದ್ರ ಸರ್ಕಾರ ವಿದ್ಯುತ್ ಶಕ್ತಿ ಉತ್ಪಾದನೆ ಮತ್ತು ವಿತರಣೆಯನ್ನು ಬಡ ಜನರಿಗೆ ಬೆಳಕು ಸಿಗಲಿ ಎಂದು ಭಾಗ್ಯಜ್ಯೋತಿ, ಯೋಜನೆಗಳನ್ನು ತರಲಾಗಿತ್ತು. ಈ ಯೋಜನೆಗಳು ಇನ್ನು ಮುಂದೆ ಇರುವದಿಲ್ಲ. ರೈತರ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ನಿಲ್ಲುತ್ತದೆ. ರೈತರು ಕೃಷಿ ಮಾಡಲು ಕಷ್ಟಗಳನ್ನು ಸೃಷ್ಟಿಸಿ ಒಕ್ಕಲುತನ ದಿಂದ ಹೊರಹಾಕಿ ಕೃಷಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ವಹಿಸುವ ವ್ಯವಸ್ಥೆ ಸೃಷ್ಟಿಸುತ್ತಿವೆ. ಎಂದು ರಾಜ್ಯ ಸರ್ಕಾರ ವಿರುದ್ಧ ಹರಿಹಾಯ್ದಿದರು. ಇನ್ನೋಮ್ಮೆ ಸರ್ಕಾರ ಈ ಕಾಯ್ದೆಗಳ ಬಗ್ಗೆ ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದರು