ಹುಬ್ಬಳ್ಳಿ: ರಾಷ್ಟ್ರೀಯ ಕೋಲಿ ಬೆಸ್ತ ಹಿಂದುಳಿದ ವರ್ಗಗಳ ಮಠಾಧೀಶರ ಮಹಾಸಭಾ ವತಿಯಿಂದ ನ.3ರಂದು ಬೆಳಿಗ್ಗೆ 10 ಗಂಟೆಗೆ ಚಿಂತನ ಮಂಥನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಉಪ್ಪಾರ ಭಗೀರಥ ಗುರುಪೀಠದ ಭಗೀರಥಾನಂದಪುರಿ ಸ್ವಾಮೀಜಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕುಲ ರಸ್ತೆಯ ಆರ್.ಎಂ.ಲೋಹಿಯಾನಗರದ ಅಪ್ಪು ಪ್ಲಾಜಾದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕೋಲಿ ಬೆಸ್ತ, ಉಪ್ಪಾರ, ಶಿಕ್ಕಲಗಾರ, ಲಂಬಾಣಿ, ಕುರುಬ, ಕಮ್ಮಾರ, ಕಿಂಚಿ ಕೊರವರ ಸೇರಿದಂತೆ ವಿವಿಧ ಹಿಂದುಳಿದ ವರ್ಗಗಳ ಮಠಾಧೀಶರು, ವಿವಿಧ ಸಮಾಜಗಳ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ರಾಷ್ಟ್ರ ವಿರೋಧಿ ಚಟುವಟಿಕೆ ಮಾಡುವವರ ವಿರುದ್ಧ ಜಾಗೃತಿ ಮೂಡಿಸುವುದು, ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಂಘಟನೆ ಸ್ಥಾಪನೆ, ಹೊಸ ಮಠಗಳ ಸ್ಥಾಪನೆಗೆ ಜಾಗ, ಈಗ ಇರುವ ಮಠಗಳ ಅಭಿವೃದ್ಧಿಗೆ ಅನುದಾನ, ಮೀಸಲಾತಿ, ಜಾತಿ ಜನಗಣತಿ ವರದಿ ಬಿಡುಗಡೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.