ಬೆಳಗಾವಿ: ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ್ ನೇತೃತ್ವದಲ್ಲಿ 2022ರ ನವೆಂಬರ್‌ನಿಂದ ಈವರೆಗೆ 12 ಬಾರಿ ಫೋನ್ ಇನ್ ಕಾರ್ಯಕ್ರಮ ನಡೆದಿದ್ದು, ಇಂದು 13ನೇ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಡಿಸಿಪಿ ಶೇಖರ್ ಎಚ್.ಟಿ. ಕೂಡ ಭಾಗವಹಿಸಿದ್ದರು.
ಜಿಲ್ಲೆಯ ವಿವಿಧೆಡೆಯಿಂದ 62 ಜನರು ಕರೆ ಮಾಡಿ, ತಮ್ಮ ಸಮಸ್ಯೆ ಹೇಳಿಕೊಂಡರು. ಕೆಲ ಜನರಿಗೆ ಸ್ಥಳದಲ್ಲೇ ಪರಿಹಾರವನ್ನು ಕೂಡ ಅಧಿಕಾರಿಗಳು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಅಕ್ರಮ ಮದ್ಯ ಮಾರಾಟ, ಖಾಸಗಿ ಶಾಲೆಯಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದು, ಪ್ರವಾಹದಲ್ಲಿ ಮನೆ ಕಳೆದುಕೊಂಡವರು ಮತ್ತು ಕಾಲುವೆಗಾಗಿ ಜಮೀನು ನೀಡಿದವರಿಗೆ ಪರಿಹಾರ ಸಿಗದಿರುವುದು, ರಸ್ತೆ ಮತ್ತು ಸ್ಮಶಾನಭೂಮಿ ನಿರ್ಮಾಣಕ್ಕಾಗಿ ಜಾಗದ ಸಮಸ್ಯೆ, ಚರಂಡಿ, ವಿದ್ಯುತ್, ಕಸ ವಿಲೇವಾರಿ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಜನರು ಕರೆ ಮಾಡಿ ತಮ್ಮ ಅಳಲು ತೋಡಿಕೊಂಡರು.
ಅಥಣಿ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿನಾಕಾರಣ ಹೆಚ್ಚಿನ ಡೋನೇಷನ್ ಪಡೆಯುತ್ತಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ವ್ಯಕ್ತಿಯೊರ್ವ ದೂರಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಮೊದಲು ಬಂದು ಪೋಷಕರು ದೂರು ನೀಡಿದರೆ ಆಯಾ ಶಿಕ್ಷಣ ಸಂಸ್ಥೆಯ ವಿರುದ್ಧ ಮುಲಾಜಿಲ್ಲದೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ರಾಯಬಾಗ ತಾಲೂಕಿನ ಮೊರಬ ಗ್ರಾಮದ ವ್ಯಕ್ತಿಯೊರ್ವ ಕರೆ ಮಾಡಿ, ಯೂಟ್ಯೂಬ್ ಚಾನಲ್ನ ಹೆಸರು ಹೇಳಿಕೊಂಡು ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಅಲ್ಲದೆ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರಿದರು. ಇದಕ್ಕೆ ಉತ್ತರಿಸಿದ ಎಸ್ಪಿ ಸಂಜೀವ ಪಾಟೀಲ್, ಯೂಟ್ಯೂಬ್ ಚಾನಲ್ ಹೆಸರು ಹೇಳಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ, ಬ್ಲ್ಯಾಕ್ ಮೇಲ್ ಮಾಡಿದರೆ ಅಂಥವರ ವಿರುದ್ಧ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬೆಳಗಾವಿ ನಗರದ ವ್ಯಕ್ತಿಯೋರ್ವ ಕರೆ ಮಾಡಿ ಮಹಾನಗರ ಪಾಲಿಕೆಯ ಸಮುದಾಯದ ಭವನ ನಿರ್ಮಾಣದಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಅದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿಸಿ, ಪಾಲಿಕೆಯ ಆಯುಕ್ತರು ಇಲ್ಲಿಯೇ ಇದ್ದಾರೆ. ಅವರಿಗೆ ಸೂಚನೆ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಇಲ್ಲಿಯವರೆಗೆ ತನಿಖೆ ಮಾಡುತ್ತಿಲ್ಲ ಎಂದು ವ್ಯಕ್ತಿಯೊರ್ವ ಕರೆ ಮಾಡಿ ದೂರಿದರು. ಇದಕ್ಕೆ ಸ್ಪಂದಿಸಿದ ಡಿಸಿಪಿ ಶೇಖರ ಎಸ್ ಟಿ, ಮಾರಿಹಾಳ ಸಿಪಿಐ ಹಾಗೂ ಎಸಿಪಿಗೆ ತನಿಖೆ ನಡೆಸಲು ಸೂಚಿಸಲಾಗುವುದು ಎಂದರು.
ಈ ವೇಳೆ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಪೊಲೀಸ್ ಇನಸ್ಪೆಕ್ಟರ್‌ಗಳಾದ ಬಿ.ಆರ್. ಗಡ್ಡೇಕರ, ಮಹಾದೇವ ಎಸ್.ಎಂ. ಬಾಳಪ್ಪ ತಳವಾರ, ವಿಠ್ಠಲ ಮಾದರ, ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.