ಬೆಳಗಾವಿ: ಮಕ್ಕಳ ರಕ್ಷಣಾ ಹಕ್ಕು ಮತ್ತು ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾ. 7ರಂದು ಜಿಲ್ಲೆಯ 1200 ಪ್ರೌಢಶಾಲೆಗಳಲ್ಲಿ ಒಂದೇ ಸಮಯಕ್ಕೆ ಏಕಕಾಲಕ್ಕೆ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ ಅವರು ತಿಳಿಸಿದರು.
ಜಿಲ್ಲಾ ನ್ಯಾಯಲಯದ ಸಭಾಂಗಣದಲ್ಲಿ ಜರುಗಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು. ಪೋಕ್ಸೊ ಕಾನೂನು, ಬಾಲ ಕಾರ್ಮಿಕ ಪದ್ಧತಿ, ಬಾಲ್ಯವಿವಾಹದ, ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದಲ್ಲಿ ಏಕಕಾಲಕ್ಕೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಇದೇ ಮೊದಲಾಗಿದ್ದು ದಾಖಲೆಯ ಕಾರ್ಯಕ್ರಮವಾಗಿದೆ ಎಂದರು.
ನಗರದ ತಿಳಕವಾಡಿ ಕೆಎಲ್‌ಎಸ್ ಹೈಸ್ಕೂಲ್‌ನಲ್ಲಿ ಮುಖ್ಯ ಕಾರ್ಯಕ್ರಮವಿದ್ದು, ಇಲ್ಲಿಂದಲೇ ಸಾಂಕೇತಿಕವಾಗಿ ಜಿಲ್ಲೆಯ ಎಲ್ಲ ಕಾರ್ಯಕ್ರಮಗಳನ್ನು ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ಜಯಂತ ಬ್ಯಾನರ್ಜಿ ವಿಡಿಯೋ ಕಾನ್ಸರೆನ್ಸ್ ಮೂಲಕ ಉದ್ಘಾಟನೆ ಮಾಡುವರು. 65 ಜನ ನ್ಯಾಯಾಧೀಶರು ಒಂದೊಂದು ಶಾಲೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ವಕೀಲರು, ಅರೆಕಾಲಿಕ ಸ್ವಯಂ ಸೇವಕರು, ಮಧ್ಯಸ್ಥಿಕೆದಾರರು ಆಯಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಬೆಳಗಾವಿ ನಗರದಲ್ಲಿ 25 ಪ್ರೌಢ ಶಾಲೆಗಳಲ್ಲಿ ನ್ಯಾಯಾಧೀಶರೇ ನೇರವಾಗಿ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ. ಮಕ್ಕಳಲ್ಲಿ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ ಜಿಲ್ಲೆಯಲ್ಲಿನ ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಗಳನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ ಎಂದು ಹೇಳಿದರು.
ಈ ವರ್ಷದ ಮೊದಲನೇ ಲೋಕ ಅದಾಲತ ಮಾ. 14ರಂದು ಜಿಲ್ಲೆಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜನೆಯಾಗಿದೆ. ಇದಕ್ಕಾಗಿ 85 ಲೋಕ ಅದಾಲತ್ ಪೀಠಗಳನ್ನು ನಿಯೋಜಿಸಲಾಗಿದ್ದು 28 ಸಾವಿರ ಪ್ರಕರಣ ರಾಜಿಗೆ ಗುರುತು ಮಾಡಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ನ್ಯಾಯಾಲಯದಲ್ಲಿರುವ 20,408 ಪ್ರಕರಣ ಇತ್ಯರ್ಥ ಮಾಡಲಾಗಿದೆ.
ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಪಡಿಸುವ ಮಧ್ಯಸ್ಥಿಕೆದಾರರ ನೇಮಕವಾಗಿದೆ. ಕೌಟುಂಬಿಕ ಕಲಹ, ವೈವಾಹಿಕ ಕಲಹಗಳನ್ನು ಮಧ್ಯಸ್ಥಿಕೆ ವಹಿಸಿ ರಾಜಿ ಮಾಡಿಸುತ್ತಾರೆ. ಇದಕ್ಕಾಗಿ 90 ದಿನಗಳ ಕಾರ್ಯಕ್ರಮ ಆಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಏಪ್ರಿಲ್‌ರೆಗೂ ಇರಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ ವಿವರಿಸಿದರು.
Laxmi News 24×7